ಮಡಿಕೇರಿ ಮಾ.9 : ಪೊನ್ನಂಪೇಟೆಯ ಹಳ್ಳಿಗಟ್ಟುವಿನ ಸಿ.ಐ.ಟಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಕೃಷಿ ಮಹೋರ್ಚದ ನಿರ್ದೇಶಕಿ ಯಮುನಾ ಅಶೋಕ್ ಚಂಗಪ್ಪ, ಸ್ತ್ರೀ – ಪುರುಷರಿಬ್ಬರು ಸಮಾನರು, ಆಡು ಮುಟ್ಟದ ಸೊಪ್ಪಿಲ್ಲ ಸ್ತ್ರೀ ಪ್ರವೇಶಿಸದ ಕ್ಷೇತ್ರವಿಲ್ಲ ಎಂಬ ಮಾತಿನಂತೆ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ವೈಮಾನಿಕ ಬಾಹ್ಯಾಕಾಶ ಹೀಗೆ ಹಲವಾರು ಕ್ಷೇತ್ರದಲ್ಲಿ ಸ್ತ್ರೀ ಪುರುಷರಿಗೆ ಸರಿಸಮಾನವಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸಾಧಕಿಯರ ವಿಚಾರಧಾರೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಐ.ಟಿ.ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಸವರಾಜು, ಮಹಿಳೆಯರ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರೋಹಿಣಿ ತಿಮ್ಮಯ್ಯ ಮತ್ತು ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಐ.ಕೆ.ಯಮುನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಐ.ಟಿ.ಪ್ರಾಧ್ಯಾಪಕ ವೃಂದ, ಬೋಧಕೇತರ ವೃಂದ, ವಿದ್ಯಾರ್ಥಿ ವೃಂದ ಪಾಲ್ಗೊಂಡಿದ್ದರು.