ಮಡಿಕೇರಿ ಮಾ.15 : ಕಾವೇರಿ ನದಿಯ ಉದ್ಭವ ಕ್ಷೇತ್ರ ತಲಕಾವೇರಿಯ ಕಾವೇರಿ ತೀರ್ಥ ಮತ್ತು ಪ್ರಸಾದವನ್ನು ಇ-ಪ್ರಸಾದ ಪರಿಕಲ್ಪನೆಯಡಿ ಅಂಚೆ ಮೂಲಕ ಭಕ್ತರಿಗೆ ವಿತರಿಸುವ ಆಡಳಿತ ವ್ಯವಸ್ಥೆಯ ಕ್ರಮವನ್ನು ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಉಳ್ಳಿಯಡ ಎಂ.ಪೂವಯ್ಯ ಅಂಚೆ ಮೂಲಕ ಕಾವೇರಿ ತೀರ್ಥ ವಿತರಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಮಡಿಕೇರಿಯ ಅಂಚೆ ಕಚೇರಿಯ ಮುಂಭಾಗ ಅಳವಡಿಸಿರುವ ಕಾವೇರಿ ತೀರ್ಥ ಮಾರಾಟದ ಬ್ಯಾನರ್ ನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಲಕಾವೇರಿ ಕ್ಷೇತ್ರ ಎನ್ನುವುದು ಇತರ ದೇವ ನೆಲೆಗಳಂತೆ ಅಲ್ಲ. ಕ್ಷೇತ್ರದಲ್ಲಿನ ಬ್ರಹ್ಮಕುಂಡಿಕೆಯಿಂದ ಚಿಲುಮೆಯಾಗಿ ಹರಿದು ಬರುವ ನೀರು ಕಾವೇರಿಯಾಗಿದ್ದು, ಆಕೆಗೆ ಯಾವುದೇ ಸ್ವರೂಪವೂ ಇಲ್ಲ. ಜಲ ರೂಪಿಣಿಯಾದ ಕಾವೇರಿ ಕುಲದೇವತೆಯಾಗಿ ಪೂಜಿಸಲ್ಪಡುತ್ತಾಳೆ. ಇಂತಹ ಕಾವೇರಿಯನ್ನು ತೀರ್ಥ ಪ್ರಸಾದವೆಂದು 300 ರೂ.ಗಳಿಗೆ ಮಾರಾಟ ಮಾಡುವ ಕ್ರಮ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕೃತಿಯ ನಡುವೆ ಇರುವ ತಲಕಾವೇರಿ ಕ್ಷೇತ್ರಕ್ಕೆ ಪೂಜ್ಯಭಾವನೆಯಿಂದ ತೆರಳಿ ತೀರ್ಥ ಸ್ವೀಕರಿಸುವುದು ಕ್ರಮ. ಈ ತೀರ್ಥವನ್ನು ಅಂಚೆ ಇಲಾಖೆಯ ಸಹಯೋಗದೊಂದಿಗೆ ಮಾರಾಟ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಪೂವಯ್ಯ, ಈ ಕ್ರಮದಿಂದ ಸ್ಥಳೀಯರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದರು.
ಇಂತಹ ಯೋಜನೆಯನ್ನು ಆರಂಭಿಸುವುದಕ್ಕೂ ಮೊದಲು ಕಾವೇರಿಯ ಭಕ್ತರು, ಸಂಬಂಧಪಟ್ಟ ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನವನ್ನೂ ಜಿಲ್ಲಾಡಳಿತ ಮಾಡಿಲ್ಲ. ಕಾವೇರಿ ತೀರ್ಥ ವಿತರಣೆಯ ಯೋಜನೆ ಆರಂಭಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಗೆ ಚ್ಯುತಿ ತರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇ-ಪ್ರಸಾದದಲ್ಲಿ 100 ಎಂ.ಎಲ್. ತೀರ್ಥದೊಂದಿಗೆ ಕ್ಷೇತ್ರದ ಪ್ರಸಾದವೆಂದು ಪಂಚಕಜ್ಜಾಯ, ಕುಂಕುಮ, ಗಂಧವನ್ನು ಮಾರಾಟ ಮಾಡಲಾಗುತ್ತಿದೆ. ಪ್ರಕೃತಿಯ ಮಡಿಲ ತಲಕಾವೇರಿ ಕ್ಷೇತ್ರದಲ್ಲಿ ಇತರ ದೇಗುಲಗಳಂತೆ ಪಂಚಕಜ್ಜಾಯದ ಪ್ರಸಾದವಿಲ್ಲವೆಂದು ಸ್ಪಷ್ಟಪಡಿಸಿದರು.
ವೇದಿಕೆಯ ಕಾನೂನು ಸಲಹೆಗಾರ ಕಿರಿಯಮಾಡ ರತನ್ ತಮ್ಮಯ್ಯ ಮಾತನಾಡಿ, ಪವಿತ್ರ ಕಾವೇರಿ ತೀರ್ಥವನ್ನು ಮಾರಾಟ ಮಾಡುವುದು ಸರಿಯಲ್ಲ, ಈ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದರು.
ವೇದಿಕೆಯ ಸದಸ್ಯೆ ಹಾಗೂ ತಿರಿ ಬೊಳ್ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಸ್ಥಳ ಪುರಾಣ ಮತ್ತು ಇತಿಹಾಸದ ಕನಿಷ್ಠ ಜ್ಞಾನವಿಲ್ಲದೆ ಆರಂಭಿಸಿರುವ ತೀರ್ಥ ಮಾರಾಟದ ಯೋಜನೆಗೆ ನಮ್ಮ ವಿರೋಧವಿದೆ ಎಂದರು.
ಮಹಿಳೆಯರೇ ಒಗ್ಗೂಡಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವೇದಿಕೆಯ ಸದಸ್ಯ ಪುಡಿಯಂಡ ಕೆ.ಮುತ್ತಣ್ಣ ಉಪಸ್ಥಿತರಿದ್ದರು.









