ಸುಂಟಿಕೊಪ್ಪ ಮಾ.15: ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಪಂದ್ಯಾವಳಿಗೆ ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್ ನಾಯಕರಾಗಿ ಆಯ್ಕೆಗೊಂಡಿರುವ ಹಿನ್ನಲೆಯಲ್ಲಿ ಸುಂಟಿಕೊಪ್ಪ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭಹಾರೈಸಲಾಯಿತು.
ಸುಂಟಿಕೊಪ್ಪ ಗ್ರಾ.ಪಂ ಆವರಣದಲ್ಲಿ ನಡೆದ ಜೌಪಚಾರಿಕ ಕಾರ್ಯಕ್ರಮದಲ್ಲಿ ವೇಣುಗೋಪಾಲ್ ಅವರನ್ನು ಬ್ಲೂಬಾಯ್ಸ್ ಯೂತ್ ಮಾಜಿ ಅಧ್ಯಕ್ಷ ಹಿರಿಯ ಆಟಗಾರ ಬಿ.ಸಿ.ಸತ್ಯಕುಮಾರ್ ಸನ್ಮಾನಿಸಿದರು.
ಇದೇ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಹಿರಿಯ ಪತ್ರಕರ್ತ ವಹೀದ್ ಜಾನ್, ಪಿಡಿಓ ಕ್ರೀಡಾಭಿಮಾನ ಮತ್ತು ಸಾಧನೆಯ ಕುರಿತು ಮಾತನಾಡಿ ಶುಭಕೋರಿದರು.
ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಆಲಿಕುಟ್ಟಿ, ಗ್ರಾ.ಪಂ ಸದಸ್ಯರಾದ ರಫೀಕ್ ಖಾನ್, ಶಬ್ಬೀರ್, ಹಿರಿಯ ಪತ್ರಕರ್ತ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಸಿ.ದಿನೇಶ್, ಪವಿ, ಜೇಮ್ಸ್, ಸಂತೋಷ್, ವಸಂತ, ಮಾಜಿ ಸದಸ್ಯ ಸೋಮಯ್ಯ ಹಾಜರಿದ್ದರು.
ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆಯಲಿರುವ 2022-23ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡದ ಕ್ಯಾಪ್ಟನ್ ಆಗಿ ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಹೆಚ್.ವೇಣುಗೋಪಾಲ್ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಾ.18 ರಿಂದ 23ರ ವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ಕಳಿಂಗ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರಮಟ್ಟದ ನಾಗರಿಕ ಸೇವಾ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ವೇಣುಗೋಪಾಲ್ ಅವರು 20 ಮಂದಿ ಫುಟ್ಬಾಲ್ ಆಟಗಾರರನ್ನು ಒಳಗೊಂಡ ಕರ್ನಾಟಕ ರಾಜ್ಯದ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಪಂದ್ಯದಲ್ಲಿಯೂ ಕೂಡ ಮೂಲತಃ ಸೋಮವಾರಪೇಟೆ ತಾಲೂಕಿನ ಬೀಟಿಕಟ್ಟೆಯವರಾಗಿರುವ ವೇಣುಗೋಪಾಲ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.








