ಮಡಿಕೇರಿ ಮಾ.15 : ಧಾರ್ಮಿಕ ನಂಬಿಕೆಯನ್ನು ಅವಹೇಳನ ಮಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಬಿಜೆಪಿ ಹಾಗೂ ಈಶ್ವರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮಡಿಕೇರಿ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ ಅಭಿವೃದ್ಧಿ ಪರ ಚಿಂತನೆ ಹರಿಸದ ಬಿಜೆಪಿ ಮಂದಿ ಧಾರ್ಮಿಕ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡುತ್ತಿದ್ದಾರೆ. ಪ್ರಸ್ತುತ ಉದ್ಭವಿಸುತ್ತಿರುವ ಹಣದುಬ್ಬರ, ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಮಾತನಾಡದ ಬಿಜೆಪಿ, ಸಮುದಾಯಗಳ ಭಾವನೆಗೆ ಧಕ್ಕೆಯುಂಟುಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾಜದಲ್ಲಿ ಒಡಕು ಮೂಡಿಸಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಬಿಜೆಪಿ ಇದೆ. ಆದರೆ ಯಾವುದೇ ಕಾರಣಕ್ಕು ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಅದರಲ್ಲಿ ಎಸ್‍ಡಿಪಿಐ ಪ್ರಮುಖ ಪಾತ್ರ ವಹಿಸಲಿದೆ. ಬಿಜೆಪಿ ನ್ಯೂನತೆಗಳ ವಿರುದ್ಧ ವಿಧಾನಸಭೆಯಲ್ಲಿ ಎಸ್‍ಡಿಪಿಐ ಧ್ವನಿ ಎತ್ತಲಿದೆ ಎಂದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ಮಾತನಾಡಿ, ಸಂಸ್ಕಾರವಿಲ್ಲದ ನಾಲಿಗೆ ಏನನ್ನು ಬೇಕಾದರೂ ಮಾತನಾಡುತ್ತದೆ ಎನ್ನುವುದಕ್ಕೆ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಉದಾಹರಣೆಯಾಗಿದೆ ಎಂದು ಟೀಕಿಸಿದರು.
ಆಝಾನ್ ವಿರುದ್ಧ ಮಾತನಾಡಿರುವ ಈಶ್ವರಪ್ಪ ಅವರು, ಮಕ್ಕಳ ಪರೀಕ್ಷೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿಲ್ಲವೇ, ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವುದೇ ಸಂಕಲ್ಪ ಯಾತ್ರೆಯ ಉದ್ದೇಶವೇ ಎಂದು ಪ್ರಶ್ನಿಸಿದರು.
ಒಂದು ಸಣ್ಣ ಮೆಸೇಜ್‍ನ್ನು ಅನುಚಿತವೆಂದು ಪರಿಗಣಿಸಿ ಯುವಕರನ್ನು ಬಂಧಿಸುವ ಪೊಲೀಸರು, ಅಝಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಈಶ್ವರಪ್ಪ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಬ್ದುಲ್ ಅಡ್ಕಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಯ ಎಸ್‍ಡಿಪಿಐ ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










