ಮಡಿಕೇರಿ ಮಾ.15 : ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾ.18 ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಸಮ್ಮೇಳನದ ಯಶಸ್ಸಿಗೆ ಶ್ರಮಿಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಸಿದ್ಧತೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು.
ಫಲಾನುಭವಿಗಳ ಸಮ್ಮೇಳನವು ಸರ್ಕಾರದ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಅವರು ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಫಲಾನುಭವಿಗಳ ಸಮ್ಮೇಳನ ಜೊತೆಗೆ ನಗರದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ, ಗ್ರೇಟರ್ ರಾಜಸೀಟು ಉದ್ಯಾನವನ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬಿ.ಸಿ.ನಾಗೇಶ್ ಅವರು ಹೇಳಿದರು.
ಕಾರ್ಯಕ್ರಮ ಸಂಬಂಧ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಹಂತದ ಅಧಿಕಾರಿಗಳು ತೊಡಗಿಸಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಹಕಾರ, ಪರಿಶಿಷ್ಟ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ಮಿಕ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡೆ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ, ಕಂದಾಯ, ಸಾರ್ವಜನಿಕ ಶಿಕ್ಷಣ, ಪೌರಾಡಳಿತ, ಸೆಸ್ಕ್, ನಗರ ಕುಡಿಯುವ ನೀರು ಪೂರೈಕೆ ಹೀಗೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸೌಲಭ್ಯ ಪಡೆದಿರುವ ಹಾಗೂ ಪಡೆಯುವ ಫಲಾನುಭವಿಗಳನ್ನು ಆಹ್ವಾನಿಸುವಂತೆ ಸಚಿವರು ಹೇಳಿದರು.
ಫಲಾನುಭವಿಗಳ ಆಹ್ವಾನ, ವೇದಿಕೆ ನಿರ್ಮಾಣ, ಕುಡಿಯುವ ನೀರು, ಮಧ್ಯಾಹ್ನ ಉಪಹಾರ ಮತ್ತಿತರ ಬಗ್ಗೆ ಸಚಿವರು ಮಾಹಿತಿ ಪಡೆದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಇನ್ನೂ ಹಲವು ಕಾಮಗಾರಿಗಳು ಉದ್ಘಾಟನೆಗೆ ಸಿದ್ಧವಾಗಿದ್ದು, ಅವುಗಳನ್ನು ಸೇರಿಸುವಂತೆ ಸಲಹೆ ಮಾಡಿದರು.
ಫಲಾನುಭವಿಗಳ ಸಮ್ಮೇಳನ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮವು ಸರ್ಕಾರದ್ದಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಮುತುವರ್ಜಿ ವಹಿಸಿ, ಸಮ್ಮೇಳನ ಯಶಸ್ಸಿಗೆ ಮುಂದಾಗುವಂತೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯಗಳ ಒಂದಲ್ಲ ಒಂದು ಫಲಾನುಭವಿಗಳಾಗಿದ್ದಾರೆ ಎಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ 50 ಸೆಂಟ್ ಗಿಂತ ಕಡಿಮೆ ಭೂಮಿ ಹೊಂದಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.
ನಂಜರಾಯಪಟ್ಟಣ, ಶಿರಂಗಾಲ, ಹೊಸಪಟ್ಟಣ, ರಂಗಸಮುದ್ರ ಇತರೆ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಅಪ್ಪಚ್ಚು ರಂಜನ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು 50 ಸೆಂಟ್‍ಗಿಂತ ಹೆಚ್ಚು ಭೂಮಿ ಹೊಂದಿರುವ ಅರ್ಜಿಗಳ ಸಂಬಂಧ ಮರು ಪರಿಶೀಲನೆ ಮಾಡಲು ಸೂಚಿಸಲಾಗಿದೆ. 50 ಸೆಂಟ್‍ಗಿಂತ ಕಡಿಮೆ ಭೂಮಿ ಹೊಂದಿರುವ ಅರ್ಜಿಗಳ ಸಂಬಂಧ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಅನುಮೋದನೆ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ 615 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಧ್ವನಿಗೂಡಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಇತರೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧ ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ಮಾಹಿತಿ ನೀಡಿದರು.








