ಮಡಿಕೇರಿ ಮಾ.15 : ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ಅಡುಗೆ ಅನಿಲದ ಸಿಲಿಂಡರ್ ಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಹಿಳಾ ಕಾಂಗ್ರೆಸ್ ನ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಬಡವರ, ಮಹಿಳೆಯರ ಪರ ಕೆಲಸ ಮಾಡಲು ಬಿಜೆಪಿ ಸರ್ಕಾರಕ್ಕೆ ತಾಕತ್ತಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಇಚ್ಛಾಶಕ್ತಿ ಇಲ್ಲ. ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಮಾನವೀಯತೆ ಎಂಬುವುದಿದ್ದರೆ ತಕ್ಷಣ ಅಡುಗೆ ಅನಿಲದ ಬೆಲೆ ಮತ್ತು ತೆರಿಗೆ ಹೊರೆಯನ್ನು ಇಳಿಕೆ ಮಾಡಿ ಬಡವರ ಕಷ್ಟಗಳಿಗೆ ಸ್ಪಂದಿಸಲಿ ಎಂದರು.
ನಿತ್ಯ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದು, ಬಹುಮತದೊಂದಿಗೆ ಕಾಂಗ್ರೆಸ್ ಅಧಿಕ್ಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಒಂದೆರಡು ರೂ. ಬೆಲೆ ಏರಿಕೆಯಾದರೂ ಬಿಜೆಪಿ ರಸ್ತೆಗೆ ಬಂದು ಬಾಯಿ ಬಡಿದುಕೊಳ್ಳುತ್ತಿತ್ತು. ಆದರೆ ಇಂದು ಇವರದ್ದೇ ನೇತೃತ್ವದ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಕೈಗೆಟುಕದಷ್ಟು ಎತ್ತರಕ್ಕೆ ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ, ಬಿಜೆಪಿ ಸರ್ಕಾರಕ್ಕೆ ಮಹಿಳೆರ ಮೇಲೆ ಕರುಣೆ ಇಲ್ಲದಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರು, ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಪ್ರತಿ ಕುಟುಂಬದ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಪ್ರೋತ್ಸಾಹ ಧನ, ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಮತ್ತು 200 ಯೂನಿಟ್ ಉಚಿತ ವಿದ್ಯುತ್ ನೀಡಲಿದೆ ಎಂದರು.
ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಗೆಲುವಿಗಾಗಿ ಮಹಿಳಾ ಕಾಂಗ್ರೆಸ್ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ಸಂಕಷ್ಟ ಎದುರಾಗಿದೆ. ಹೆಚ್ಚಿನ ಹಣ ನೀಡಿ ಸಿಲಿಂಡರ್ ಖರೀದಿಸಲಾಗದೆ ಸೌದೆಯ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಾದ ಡಬ್ಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬೆಲೆ ಏದರಿಕೆಯಿಂದ ನೊಂದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ರಮಾನಾಥ್, ಅಬ್ದುಲ್ ಗಫೂರ್, ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ವಿ.ಪಿ.ಶಶಿಧರ್, ಇಸ್ಮಾಯಿಲ್, ಹಂಸ, ಭಾರತಿ, ಪೊನ್ನಕ್ಕಿ, ಮೀನಾಕ್ಷಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಜಿ.ಪಂ ಮಾಜಿ ಸದಸ್ಯ ಲತೀಫ್, ಡಿಸಿಸಿ ಸದಸ್ಯರಾದ ಸುಮಿತಾ ಮಾದಪ್ಪ, ಫಿಲೋಮಿನಾ, ನೆರವಂಡ ಉಮೇಶ್, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪಕ್ಷದ ನಗರಾಧ್ಯಕ್ಷ ಬಿ.ವೈ.ರಾಜೇಶ್, ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಬೆಳ್ಯಪ್ಪ, ಮಾಜಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ವಕ್ತಾರ ತೆನ್ನಿರ ಮೈನಾ, ಸಂದೀಪ್, ಚುಮ್ಮಿ ದೇವಯ್ಯ, ಜುಲೇಕಾಬಿ, ಮುಮ್ತಾಜ್ ಬೇಗಂ, ಟೀನಾ, ಜಫ್ರುಲ್ಲಾ, ಇಮ್ರಾನ್, ರವೂಫ್, ಪಿಯೂಷ್ ಪೆರೆರಾ ಸೇರಿದಂತೆ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಖಾಲಿ ಸಿಲಿಂಡರ್ ಮತ್ತು ಕಟ್ಟಿಗೆಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ಪ್ರಮುಖರು ಸರ್ಕಾರದ ಧೋರಣೆಯನ್ನು ಖಂಡಿಸಿದರು.








