ಮಡಿಕೇರಿ ಮಾ.23 : ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಕೋಕೇರಿ-ಕೊಳಕೇರಿ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಎರಡೂ ಗ್ರಾಮಸ್ಥರು ಮಾತನಾಡಿ, ಶಾಲಾ ಮಕ್ಕಳು, ಸಾರ್ವಜನಿಕರು, ವಾಹನಗಳ ಸಂಚಾರ ಅಸಾಧ್ಯವಾಗಿರುವ ಕೋಕೇರಿ-ಕೊಳಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮಾ.25 ರಂದು ಕೊಳಕೇರಿಯಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಾಗುವುದು ಎಂದರು.
ನಾಪೋಕ್ಲು ಸಂಪರ್ಕ ರಸ್ತೆಯಾಗಿರುವ ಕೋಕೇರಿ-ಕೊಳಕೇರಿ ನಡುವೆ ಇರುವ ಜಿಲ್ಲಾ ಪಂಚಾಯ್ತಿಗೆ ಒಳಪಟ್ಟ ಸುಮಾರು 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲೆ ಪ್ರತಿನಿತ್ಯ ಆರೇಳು ಶಾಲಾ ವಾಹನಗಳು, ವಿರಾಜಪೇಟೆ-ನಾಪೋಕ್ಲು ನಡುವೆ ಖಾಸಗಿ ಬಸ್ ಸಂಚರಿಸುತ್ತದೆ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕಪಡಿಸಿದರು.
ರಸ್ತೆ ಅವ್ಯವಸ್ಥೆಯ ಬಗ್ಗೆ ಆಗಿಂದಾಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿಕೊಂಡು ಬರಲಾಗುತ್ತಿದೆ. ಚುನಾವಣಾ ಹಂತದಲ್ಲಿ ಮಾತ್ರ ರಸ್ತೆ ದುರಸ್ತಿಯ ಭರವಸೆ ನೀಡಲಾಗುತ್ತದೆ. ನಂತರ ರಸ್ತೆಯನ್ನು ಸರಿಪಡಿಸುವ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ನರಿಯಂದಡ ಗ್ರಾ.ಪಂ ಗೆ ಒಳಪಟ್ಟ ಕೋಕೇರಿ ಗ್ರಾಮದಲ್ಲಿ ಸುಮಾರು 1050 ಮತದಾರರಿದ್ದರೆ, ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೊಳಕೇರಿಯಲ್ಲಿ ಸುಮಾರು 700 ಮತದಾರರಿದ್ದಾರೆ. ರಸ್ತೆ ಅವ್ಯವಸ್ಯೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಈ ಬಾರಿ ಇವರು ಮತದಾನವನ್ನು ಬಹಿಷ್ಕರಿಸಲಿದ್ದಾರೆ ಎಂದು ತಿಳಿಸಿದರು.
ಕೋಕೇರಿ ಗ್ರಾಮದಲ್ಲಿ ಸುಮಾರು ಹದಿನೈದು ವರ್ಷಗಳ ಹಿಂದೆ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿದ್ದ ಸಮುದಾಯ ಭವನವನ್ನು ಕಾಮಗಾರಿ ಪೂರ್ಣಕ್ಕೂ ಮೊದಲೇ ಉದ್ಘಾಟಿಸಲಾಗಿತ್ತು. ಇಂದಿಗೂ ಆ ಸಮುದಾಯ ಭವನ ಜನರ ಬಳಕೆಗೆ ಬಾರದೆ ಅರೆ ಬರೆಯಾಗಿ ನಿಂತಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಕೋಕೇರಿ ಗ್ರಾಮದ ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸುಮಾರು ಎರಡು ದಶಕಗಳ ಹಿಂದೆ ನೀರಿನ ಟ್ಯಾಂಕ್‍ವೊಂದನ್ನು ನಿರ್ಮಿಸಲಾಗಿತ್ತಾದರು ಬಳಕೆಗೆ ಬರಲಿಲ್ಲ. ನಂತರದ ವರ್ಷಗಳಲ್ಲಿ ಇದೇ ಟ್ಯಾಂಕ್‍ಗೆ ಮತ್ತೆ ಸುಣ್ಣ ಬಣ್ಣ ಬಳಿದು ಉದ್ಘಾಟನೆ ಮಾಡಿದರಾದರು, ಅದಕ್ಕೆ ನೀರು ತುಂಬಿಸಿ ಜನರಿಗೆ ನೀರೊದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಕೇರಿ ಗ್ರಾಮದ ಚೇನಂಡ ಪಿ. ಜಗದೀಶ್ ನಂದ, ಚೇನಂಡ ಜಪ್ಪು ದೇವಯ್ಯ, ಚೇನಂಡ ಗಿರೀಶ್ ಪೂಣಚ್ಚ, ಕೊಳಕೇರಿ ಗ್ರಾಮಸ್ಥರಾದ ಎಂ.ಹೆಚ್. ಮೊಹಮ್ಮದ್ ರಫೀಕ್, ಎಂ.ಎ. ಮೊಯ್ದು, ಎಂ.ಎಂ. ಮೊಹಮ್ಮದ್ ಉಪಸ್ಥಿತರಿದ್ದರು.