ಮಡಿಕೇರಿ ಮಾ.28 : ಮುಸಲ್ಮಾನರಿಗಾಗಿ ಮೀಸಲಿದ್ದ ಪ್ರವರ್ಗ 2ಬಿ ಅಡಿಯ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಪಡಿಸಿರುವ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸೋಮವಾರಪೇಟೆ ತಾ.ಪಂ ಮಾಜಿ ಸದಸ್ಯ ಕೆ.ಐ.ರಫೀಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮುಸಲ್ಮಾನರಿಗಾಗಿ ಇದ್ದ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸೌಹಾರ್ಧತೆಯ ನಾಡಿನಲ್ಲಿ ಒಡೆದು ಆಳುವ ನೀತಿ ಜಾರಿಗೆ ಬರುತ್ತಿರುವುದು ದುರಂತ. ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದವರು ಹಿಂದುಳಿದ ಜನಾಂಗವಾಗಿರುವ ಮುಸಲ್ಮಾನರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅನ್ಯಾಯ ಮಾಡಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಬಹುತೇಕರು ಬಡವರಾಗಿದ್ದು, ಶೈಕ್ಷಣಿಕವಾಗಿ ಬೆಳವಣಿಗೆ ಕಾಣಬೇಕು ಎನ್ನುವ ಗುರಿ ಹೊಂದಿದ್ದಾರೆ. ಉನ್ನತ ಶಿಕ್ಷಣ ದೊರೆತರೆ ಉದ್ಯೋಗವೂ ಸಿಗಲಿದೆ.
ಬಡ ಮುಸ್ಲಿಂ ವರ್ಗ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಶೇ.4 ರಷ್ಟು ಮೀಸಲಾತಿ ಹೆಚ್ಚು ಸಹಕಾರಿಯಾಗಿತ್ತು. ಆದರೆ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ಸರ್ಕಾರ ಮುಸಲ್ಮಾನರನ್ನು ವಿವಿಧ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳನ್ನು ಮಾಡದ ಸರ್ಕಾರ ಜನರ ಹಾದಿ ತಪ್ಪಿಸುವ ಸಲುವಾಗಿ ಮೀಸಲಾತಿಯ ಗೊಂದಲಗಳನ್ನು ಸೃಷ್ಟಿಸುತ್ತಲೇ ಬರುತ್ತಿದೆ. ಸಮಾಜದಲ್ಲಿ ಒಡಕು ಮೂಡಿಸಿ ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ಭ್ರಮೆಯಲ್ಲಿರುವ ಸರ್ಕಾರಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ.ಐ.ರಫೀಕ್ ಭವಿಷ್ಯ ನುಡಿದಿದ್ದಾರೆ.









