ಮಡಿಕೇರಿ ಮಾ.28 : ಮುಸಲ್ಮಾನರ ಅಭ್ಯುದಯಕ್ಕಾಗಿ ಮೀಸಲಾಗಿರುವ ಮೀಸಲಾತಿಯನ್ನು ಈ ಹಿಂದೆ ಇದ್ದ ರೀತಿಯಲ್ಲೇ ಪ್ರವರ್ಗ 2ಬಿ ಅಡಿಯ ಶೇ.4 ರಷ್ಟು ಯಥಾಸ್ಥಿತಿ ಮುಂದುವರೆಸಬೇಕೆoದು ಕೆಪಿಸಿಸಿ ಸದಸ್ಯ ಹಾಗೂ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಸಂದರ್ಭದಲ್ಲಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಮುಸಲ್ಮಾನರ ಮೀಸಲಾತಿಯನ್ನು ಕಸಿದುಕೊಂಡು ಇತರ ಸಮುದಾಯದವರಿಗೆ ಹಂಚಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಲ್ಲಾ ಸಮುದಾಯದವರಿಗೂ ಅವರರವರ ಬೇಡಿಕೆಗೆ ಅನುಗುಣವಾಗಿ ಕಾನೂನಿನ ಚೌಕಟ್ಟಿನಡಿ ಮೀಸಲಾತಿಯನ್ನು ನೀಡಲು ನಮ್ಮ ವಿರೋಧವಿಲ್ಲ. ಆದರೆ ಕಾನೂನಾತ್ಮಕವಾಗಿ ಜಾರಿಯಲ್ಲಿದ್ದ ಮುಸಲ್ಮಾನರ ಮೀಸಲಾತಿಯನ್ನು ರದ್ದುಗೊಳಿಸಿರುವುದಕ್ಕೆ ವಿರೋಧವಿದೆ. ಈ ರೀತಿಯ ಗೊಂದಲ ಸೃಷ್ಟಿಯಿಂದ ರಾಜಕೀಯ ಲಾಭವಾಗಬಹುದೆನ್ನುವ ಭ್ರಮೆಯಲ್ಲಿ ಸರ್ಕಾರವಿದೆ. ರಾಜ್ಯದ ಜನರು ಪ್ರಜ್ಞಾವಂತರಾಗಿದ್ದು, ಮುಸಲ್ಮಾನ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಸಲ್ಮಾನರ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಯಾವ ಸಮುದಾಯದವರೂ ಕೇಳಿಲ್ಲ. ಸರ್ಕಾರ ಕ್ಷÄಲ್ಲಕ ರಾಜಕಾರಣಕ್ಕಾಗಿ ಅತಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ. ಸಮಾಜದಲ್ಲಿ ಭೇದಭಾವ ಮೂಡಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ತಾನು ತೋಡಿದ ಹಳ್ಳಕ್ಕೇ ತಾನೇ ಬೀಳುವ ಹಂತದಲ್ಲಿ ಸರ್ಕಾರವಿದೆ. ಇನ್ನಾದರು ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು. ಮುಸಲ್ಮಾನರಿಗೆ ಶೇ.4 ರಷ್ಟು ಮೀಸಲಾತಿಯನ್ನು ಮುಂದುವರೆಸಬೇಕು. ಒಡೆದು ಆಳುವ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿರುವ ಯಾಕುಬ್, ತಪ್ಪಿದಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
::: ಸರ್ವಾಧಿಕಾರಿ ಧೋರಣೆ :::
ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮ ಸರ್ವಾಧಿಕಾರಿ ಧೋರಣೆಯಿಂದ ಕೂಡಿದ್ದು, ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ನಿಲುವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳ ನಾಯಕರುಗಳು ನುಡಿಯುವ ಸತ್ಯವನ್ನು ಸಹಿಸಲಾಗದೆ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ರಾಜಕೀಯವಾಗಿ ಎದುರಾಳಿಯನ್ನು ಎದುರಿಸಲಾಗದ ಸರ್ಕಾರ ಹತಾಶ ಮನೋಭಾವದಿಂದ ವಾಮಮಾರ್ಗದ ಮೂಲಕ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಯಾಕುಬ್ ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.










