ಮಡಿಕೇರಿ ಏ.28 : ಸಮ ಸಮಾಜದ ನಿರ್ಮಾಣಕ್ಕಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತಾನು ಸ್ಪರ್ಧಿಸಿದ್ದು, ಮತದಾರರು ಸಹಕಾರ ನೀಡಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 42 ವರ್ಷಗಳಿಂದ ಕೊಡಗಿನ ಅಭಿವೃದ್ಧಿ, ಬಡವರು, ದಲಿತರು, ಆದಿವಾಸಿಗಳು ಸೇರಿದಂತೆ ಎಲ್ಲಾ ವರ್ಗದ ಜನರ ಬಗ್ಗೆ ಕಾಳಜಿ ತೋರುತ್ತಾ ಬಂದಿದ್ದೇನೆ. ನೆಲ, ಜಲ, ಪರಿಸರ ಮತ್ತು ಬಡವರ ಪರ ವಿವಿಧ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಜನ ನನ್ನ ಕಾರ್ಯವನ್ನು ಗುರುತಿಸಿ ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ದೇಶದಲ್ಲಿ ಸಂವಿಧಾನ ಯಥಾಸ್ಥಿತಿಯಲ್ಲಿ ಜಾರಿಯಾಗಿಲ್ಲ, ಬಿಜೆಪಿ ಆಡಳಿತಕ್ಕೆ ಬಂದ ನಂತರ ಬಡವರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಇನ್ನೂ ಕೂಡ ಜೀತ ಪದ್ಧತಿ ಜಾರಿಯಲ್ಲಿದೆ. ಪಾಲೆಮಾಡು ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಜಿಲ್ಲೆಯಲ್ಲಿ ಉಳಿದುಕೊಳ್ಳಲು ಸೂರಿಲ್ಲದ ಸಾಕಷ್ಟು ಜನರಿದ್ದಾರೆ. ಆದರೆ, ಸರ್ಕಾರ ಗುತ್ತಿಗೆ ಆಧಾರದಲ್ಲಿ ಉಳ್ಳವರಿಗೆ ಭೂಮಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಆದಿವಾಸಿಗಳಿಗೆ 3.45 ಸೆಂಟ್ ಜಾಗ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಕ್ಕುಪತ್ರ ನೀಡಲಿಲ್ಲ. ಆದರೆ, ಚುನಾವಣೆ ಸಂದರ್ಭ ಮಾತ್ರ ಆದಿವಾಸಿಗಳ ಬಳಿ ತೆರಳಿ ಮತಯಾಚಿಸುತ್ತಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಉಪಾಧ್ಯಕ್ಷ ಎಸ್.ಕೆ.ಸ್ವಾಮಿ, ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಜೆ.ಸಾಮಿತ್ರಮ್ಮ ಹಾಗೂ ಪ್ರಮುಖರಾದ ಕೆ.ಆರ್.ಕೀರ್ತಿರಾಜು ಉಪಸ್ಥಿತರಿದ್ದರು.








