ಮಡಿಕೇರಿ ಮೇ 2 : ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಹೆಚ್ಚು ಪ್ರಯೋಜನವಾಗುವಂತಹ ವಿಚಾರವನ್ನು ಒಳಗೊಂಡ ವಸಂತ ವಿಹಾರ ಶಿಬಿರ ಪ್ರಶಂಸನಾರ್ಹ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿದರು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ನಡೆದ ವಸಂತ ವಿಹಾರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇಕಾದಷ್ಟು ಬೇಸಿಗೆ ಶಿಬಿರಗಳು ನಡೆಯುತ್ತಿವೆ ಕೆಲವೆಡೆ ನೃತ್ಯ ಕಲಿಕೆ, ಚಿತ್ರಕಲಾ ಕಲಿಕೆ, ಕರಾಟೆ, ಈಜು, ಕ್ರೀಡೆ ಇವೆಲ್ಲವನ್ನೂ ಒಳಗೊಂಡಂತಹ ಬೇಸಿಗೆ ಶಿಬಿರಗಳು ಎಲ್ಲೆಡೆ ಆಗುತ್ತಿದ್ದರೂ ಮಕ್ಕಳಿಗೆ ಜೀವನದ ಮೌಲ್ಯಶಿಕ್ಷಣ ತರಬೇತಿ ಯೋಗಾಸನ, ಪ್ರಾಣಾಯಾಮ, ಏಕಾಗ್ರತೆಯನ್ನು ಬೆಳೆಸಿಕೊಳ್ಳುವ ವಿಧಾನ, ವ್ಯಕ್ತಿತ್ವ ವಿಕಸನ, ಆಟ, ಪ್ರವಾಸ, ಕ್ರೀಡೆ, ಇವೆಲ್ಲವನ್ನು ಒಳಗೊಂಡಂತಹ ಶಿಬಿರ ಪ್ರಶಂಸನಾರ್ಹ ಎಂದರು.
ಆಶ್ರಮವು ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಜಿಲ್ಲೆಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಮತ್ತು ಕೋವಿಡ್ ದುಸ್ಥಿತಿಯ ಸಂದರ್ಭದಲ್ಲಿ ಜನಸ್ನೇಹಿಯಾಗಿ ಲಕ್ಷಾಂತರ ರೂಪಾಯಿಗಳ ಅಹಾರ, ಬಟ್ಟೆ ಬರೆ ಗಳನ್ನು ನೀಡಿ ಮಾನವೀಯತೆ ಮೆರೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದಜೀ ಮಹಾರಾಜ್ ಮಾತನಾಡುತ್ತಾ ಸುಮಾರು 20 ವರ್ಷಗಳಿಂದ ವಸಂತ ವಿಹಾರ ಬೇಸಿಗೆ ಶಿಬಿರವು ನಡೆಯುತ್ತಾ ಬರುತ್ತಿತ್ತು. ಇದೀಗ ಕೋವಿಡ್ ಕಾರಣದಿಂದ ಮೂರು ವರ್ಷಗಳ ಕಾಲ ನಿಲುಗಡೆಗೊಂಡಿದ್ದ ಈ ಶಿಬಿರವನ್ನು ಈ ವರ್ಷ ಪುನರಾರಂಭಿಸಲಾಗಿದೆ. ಈ ಶಿಬಿರವನ್ನು ಮೈಸೂರಿನ ರಾಮಕೃಷ್ಣ ಆಶ್ರಮದ ವಿವೇಕ ಪ್ರಭಾ ಪತ್ರಿಕೆಯ ಸಂಪಾದಕರಾದ ಸ್ವಾಮಿ ಜ್ಞಾನಯೋಗಾನಂದಜೀ ಮಹಾರಾಜ್ ಉದ್ಘಾಟಿಸಿದರು.
ಆಶ್ರಮದ ಯತಿವರ್ಯರುಗಳಾದ ಸ್ವಾಮಿಪರಹಿತನಂದಜೀ ಮಹಾರಾಜ್, ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್, ಸ್ವಾಮಿ ಸರ್ವಜಯಾನಂದಜೀ ಮಹಾರಾಜ್, ಸ್ವಾಮಿ ಭೂನಾಥಾನಂದಜೀ ಮಹಾರಾಜ್, ಸ್ವಾಮಿ ಧರ್ಮನಾಥಾನಂದಜೀ ಮಹಾರಾಜ್, ಬ್ರಹ್ಮಚಾರಿ ರಾಘವನ್ ಮಹಾರಾಜ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಜೀವನ ಮೌಲ್ಯ ಆಧ್ಯಾತ್ಮಿಕ ಭಜನೆ ಇತ್ಯಾದಿಗಳನ್ನು ಬೋಧನೆ ಮಾಡಿದರು.
ಅವರೊಂದಿಗೆ ಪಿ.ರವಿಕುಮಾರ್, ಗೀತಾ ನಾಯ್ಡು, ಪ್ರೊ ಸಿ.ಎ.ನಾರಾಯಣ್, ಇಂದಿರಾ ಗಣಪತಿ, ಪ್ರೊ. ತಿಮ್ಮಯ್ಯ, ಡಾ. ಹಿತೇಶ್ ಪ್ರೊ. ಕುಶ, ಬಾನಂಡ ರಮೇಶ್, ಲೋಕನಾಥ್, ಡಾ. ಅನಂತರಾಮ್ ಮತ್ತು ಶಂಕರ್ ಶಿಬಿರಾರ್ಥಿಗಳಿಗೆ ವ್ಯಕ್ತಿ ವಿಕಸನ, ಕ್ರೀಡೆ, ಯೋಗಾಸನ, ಜೀವನ ಮೌಲ್ಯ ಸಂಬಂಧಿಸಿ ದಂತೆ ಮಾರ್ಗದರ್ಶನ ನೀಡಿದರು.
ಶಿಬಿರಾರ್ಥಿಗಳಿಗೆ ಒಂದು ದಿನದ ಪ್ರವಾಸವನ್ನು ಕೂಡ ಏರ್ಪಡಿಸಲಾಗಿತ್ತು. ಶಿಬಿರಾರ್ಥಿಗಳಿಗೆ ಉಳಿದುಕೊಳ್ಳುವ ಮತ್ತು ವಾಹನದ ವ್ಯವಸ್ಥೆಯನ್ನು ಶ್ರೀ ಸಾಯಿ ಶಂಕರ್ ವಿದ್ಯಾ ಸಂಸ್ಥೆಯ ಜರು ಗಣಪತಿ ಮತ್ತು ರಮ್ಯಾ ವ್ಯವಸ್ಥೆ ಮಾಡಿದ್ದರು.
ಮೈಸೂರು ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಕ್ತಾರ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ಶಿಕ್ಷಣ ಜೀವನ ಮೌಲ್ಯ ಮತ್ತು ಹಿರಿಯರಿಗೆ ನೀಡಬೇಕಾದ ಗೌರವಗಳ ಕುರಿತು ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಮಾಹಿತಿ ನೀಡಿ ಅವರನ್ನು ಯೋಗ್ಯತೆಯನ್ನಾಗಿಸುವ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಆಶ್ರಮ ಸೇವೆ ಮಾಡುತ್ತಿವೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಕಾಕಮಾಡ ಚಂಗಪ್ಪ ಮಾತನಾಡಿ, ರಾಮಕೃಷ್ಣಾಶ್ರಮವು ಆಧ್ಯಾತ್ಮಿಕ ನೆಲೆಯಲ್ಲಿ ಮಾತ್ರ ಕೆಲಸ ಮಾಡದೆ ಸಾರ್ವಜನಿಕ ಕಷ್ಟನಷ್ಟಗಳಿಗೆ ಕುಂದು ಕೊರತೆಗಳಿಗೆ ಸ್ಪಂದಿಸುತ್ತಾ ಜನಸ್ನೇಹಿ ಆಶ್ರಮವಾಗಿ ಬೆಳೆಯುತ್ತಿದೆ ಎಂದು ನುಡಿದರು.
ಡಾ. ಅನಂತರಾಮು ಮಾತನಾಡಿ, ಇಪ್ಪತ್ತು ವರ್ಷಗಳಿಂದ ತಾವು ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ಬದುಕುವ ಪರಿ , ಹಿರಿಯರಿಗೆ ನೀಡುವ ಗೌರವ ಇವೆಲ್ಲವೂ ಈ ಶಿಬಿರದ ಬಳುವಳಿಯಾಗಿದೆ ಎಂದರು.
ಕಾರ್ಯಕ್ರಮದ ಮೊದಲಿಗೆ ಸ್ವಾಮಿ ಬಹುಹಿತಾನಂದ ಜಿ ಮಹಾರಾಜ್ ವೇದಪಠಣ ಮಾಡಿದರು. ಕಾರ್ಯಕ್ರಮವನ್ನು ರವಿ ನಿರೂಪಿಸಿ, ಸ್ವಾಗತಿಸಿದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಬಹುಮಾನ ನೆನಪಿನ ಕಾಣಿಕೆ ಜ್ಞಾನಪುಸ್ತಕ ನೀಡಲಾಯಿತು. ಅತಿಥಿಗಳನ್ನು ಸನ್ಮಾನಿಸಲಾಯಿತು.