ಸಿದ್ದಾಪುರ ಮೇ 7 : ಅಸ್ಸಾಂ ರಾಜ್ಯದಲ್ಲಿ ಅಭಿವೃದ್ಧಿಯಾಗಿದ್ದರೆ ಅಲ್ಲಿನ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆಯೇ ಎಂದು ಸಿಪಿಐ ಪಕ್ಷದ ಮುಖಂಡ ಕೆ.ವಿ ಸುನಿಲ್ ಪ್ರಶ್ನಿಸಿದ್ದಾರೆ.
ಸಿದ್ದಾಪುರದ ಎ ಐ ಟಿ ಯು ಸಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಕೊಡಗು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಬಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿಲ್ಲೆಯ ಕಾರ್ಮಿಕರು, ಬೆಳೆಗಾರರು ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡದೆ ಇತರ ಪಕ್ಷದವರನ್ನು ದೂರುವ ಮೂಲಕ ಧರ್ಮ ರಾಜಕೀಯ ವ್ಯವಸ್ಥೆಯಡಿಯಲ್ಲಿ ಜನಾಂಗಗಳ ನಡುವೆ ಕಂದಕ ಸೃಷ್ಟಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಕಾರ್ಮಿಕರು ಸೇರಿದಂತೆ ಅಲ್ಲಿನ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಯಾವುದೇ ಅಭಿವೃದ್ಧಿ ಕಾಣದೆ ನಿರುದ್ಯೋಗ ಸಮಸ್ಯೆಯಿಂದ ಅಸ್ಸಾಂ ರಾಜ್ಯದವರು ಕೆಲಸ ಹುಡುಕಿ ಹೊರ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗಷ್ಟೇ ಕೊಡಗು ಜಿಲ್ಲೆಗೂ ಬಂದಿರುವ ಅಸ್ಸಾಂ ಸೇರಿದಂತೆ ಇತರ ರಾಜ್ಯದ ಕಾರ್ಮಿಕರು.ಕೆಲಸ ಕೊಟ್ಟ ಮಾಲೀಕನನ್ನೇ ಗುರಿಯಾಗಿಸಿ ಅಪರಾಧ ಕೃತ್ಯಗಳನ್ನು ಮಾಡಿದ್ದಾರೆ. ಅಸ್ಸಾಂ ಸೇರಿದಂತೆ ಇತರ ರಾಜ್ಯದ ಕಾರ್ಮಿಕರ ಅಪರಾಧ ಪ್ರಕರಣಗಳನ್ನು ಖಂಡಿಸಿ ಜಿಲ್ಲೆಯಿಂದ ಹೊರ ಕಳಿಸಬೇಕೆಂದು ಒತ್ತಾಯ ಮಾಡುತ್ತಿದ್ದ ಬಿಜೆಪಿ ಇದೀಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯನ್ನು ಕರೆ ತಂದಿದೆ ಎಂದು ಟೀಕಿಸಿದರು.
ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಧರ್ಮರಾಜ ಮಾತನಾಡಿ ರಾಜ್ಯದ 7 ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಗಳು ಸ್ವರ್ಧಾ ಕಣದಲ್ಲಿದ್ದು, 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬೆಂಬಲ ವ್ಯಕ್ತಪಡಿಸಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಎ ಐ ಟಿ ಯು ಸಿ ಮುಖಂಡ ಸೋಮಪ್ಪ ಸ್ಪರ್ಧಿಸಿದ್ದು,
ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ.
ಆದಿವಾಸಿಗಳು ಸೇರಿದಂತೆ ಹಿಂದುಳಿದ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು,
ನಿರಂತರ ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನ ದೂರ ಇಡಲಾಗುತ್ತಿದೆ. ಕಾರ್ಮಿಕರು ಒಂದಾಗುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು.
ಭಾರತ ಕಮಿನಿಸ್ಟ್ ಪಕ್ಷದ ಸಹ ಕಾರ್ಯದರ್ಶಿ ರಫೀಕ್ ನವಲಗುಂದ ಮಾತನಾಡಿ
ಸ್ಥಳೀಯ ಕಾರ್ಮಿಕರು ಜಿಲ್ಲೆಯ ಬೆಳೆಗಾರರೊಂದಿಗೆ ಅನ್ಯೂನತೆಯಿಂದ ಇದ್ದು ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಂದ ಅಸ್ಸಾಂ ಸೇರಿದಂತೆ ಇತರ ರಾಜ್ಯಗಳ ಕಾರ್ಮಿಕರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸ ಸಿಗದೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಸೌಲಭ್ಯಗಳಿಂದಲೂ ವಂಚಿತರಾಗುತ್ತಿರುವ ಕಾರ್ಮಿಕರು ಸ್ವಂತ ಸೂರು ಇಲ್ಲದೆ ಸಂಕಷ್ಟದಲ್ಲೇ ದಿನ ಕಳೆಯುತ್ತಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಎ ಐ ಟಿ ಯು ಸಿ ಜಿಲ್ಲಾ ಉಪಾಧ್ಯಕ್ಷ ಮಣಿ ಮತ್ತಿತರರು ಉಪಸ್ಥಿತರಿದ್ದರು.