ನಾಪೋಕ್ಲು ಮೇ 12 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕಲ್ಲುಮೊಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಗ್ರಾ.ಪಂ ನೀರಿನ ವ್ಯವಸ್ಥೆಯನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಕಲ್ಲುಮೊಟ್ಟೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ಸರಿಯಾದ ರೀತಿಯಲ್ಲಿ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ದುಡಿದು ಜೀವನ ಸಾಗಿಸುತ್ತಿರುವ ನಮಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಒದಗಿಸಲು ಗ್ರಾ.ಪಂ ವಿಫಲವಾಗಿದೆ. ಹಲವು ಬಾರಿ ಇದರ ಬಗ್ಗೆ ಪಂಚಾಯಿತಿ ಅಧಿಕಾರಿಗಳ, ಜನ ಪ್ರತಿನಿಧಿಗಳ ಗಮನಕ್ಕೆ ತಂದಾಗ ಮೋಟಾರ್ ರಿಪೇರಿಯಾಗಿದೆ ಎಂಬ ನೆಪ ಒಡ್ಡಿ ಇದುವರೆಗೂ ಅದನ್ನು ದುರಸ್ತಿಪಡಿಸುವ ಕಾರ್ಯಕ್ಕೆ ಮುಂದಾಗದೆ ಇಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ದೂರದ ಕಾವೇರಿ ಹೊಳೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಳೆದ ಅಲವು ತಿಂಗಳಿಂದ ಕುಡಿಯುವ ನೀರು ಸರಬರಾಜು ಮಾಡುವ ಸಿಬ್ಬಂದಿ ಇಲ್ಲದೆ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ನೀರು ಪೂರೈಕೆ ಆಗದ ಪರಿಸ್ಥಿತಿ ಇದೆ.
ಸ್ವತಹ ಗ್ರಾಮಸ್ಥರೇ ದೂರದ ನದಿಯಿಂದ ವಾಹನದಲ್ಲಿ ನೀರು ತಂದು ಮನೆ ಮನೆ ಸರಬರಾಜು ಮಾಡುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಆದ್ದರಿಂದಗ್ರಾಮಕ್ಕೆ ತುರ್ತಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಆಸಿಫ್, ಬಷೀರ್, ಸೀನ,ಮುಜೀಬ್, ಆಬಿದ್, ಝಕರಿಯ,ಕೃಷ್ಣ,ಮೈಮುನ, ಶೌಕತ್, ಸಿರಾಜ್,ರಜಾಕ್,ಜಮೀಲ, ಸುಮಯ್ಯ, ಝುಬೈದ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು









