ಕುಶಾಲನಗರ ಮೇ 15 : ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿಶ್ವ ತಾಯಿಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಭೋದಕ ವರ್ಗದವರೆಲ್ಲರು ತಮ್ಮ ತಮ್ಮ ತಾಯಂದಿರನ್ನು ಕರೆತಂದು ಅವರನ್ನೆಲ್ಲಾ ಮನದುಂಬಿ ಗೌರವಿಸಿ ನಮಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಮಾತನಾಡಿದ ಮಂಗಳೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕೇಶವ ಬಂಗೇರ, ಅಮ್ಮನ ಪ್ರೀತಿಗೆ ಗೌರವ ತೋರುವ ಈ ಸುದಿನದಲ್ಲಿ ಅಮ್ಮನ ಮಮತೆಯನ್ನು ಸ್ಮರಿಸಿ ಸದಾ ಕಾಲ ಆ ತಾಯಿಗೆ ಪ್ರೀತಿಯ ಗೌರವಗಳನ್ನು ತೋರುವ ಸಂಸ್ಕಾರ ಅತ್ಯಂತ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ವ್ಯಾಸoಗ ಮಾಡುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಯುವ ಮೂಲಕ ಭಾರತೀಯ ಸನಾತನ ಪರಂಪರೆಯನ್ನು ಸಂರಕ್ಷಿಸಬೇಕಿದೆ ಎಂದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಮಹಿಳೆಗೆ ವಿಶೇಷ ಸ್ಥಾನ ಮಾನವಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಮೇಳೈಸುತ್ತಿರುವ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರಗಳು ಅತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದ ನಾಗೇಶ್, ಕೇವಲ ಹಣ ಅಥವಾ ಆಸ್ತಿಗಾಗಿ ವಿವಾಹವಾಗಿ ನಂತರ ಕೈಕೊಟ್ಟು ಹೋಗುವಂತಹ ಕೆಟ್ಟ ಪರಂಪರೆ ಸನಾತನ ಸಮಾಜಕ್ಕೆ ಮಾರಕವಾಗಿದೆ ಎಂದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಅವರ ಮಾತೃಶ್ರೀ ಶಿವಮ್ಮ, ಕಾಲೇಜಿನ ಸಂಸ್ಥಾಪಕ ಎಂ.ಜಿ.ಪ್ರಭುದೇವ್ ಅವರ ತಾಯಿ ಸರೋಜಮ್ಮ, ಚಂದ್ರಕಲಾ ಬಡಿಗೇರ್ ಮತ್ತಿತರರ ತಾಯಂದಿರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭ ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರು ಅಮ್ಮನ ಕುರಿತಾದ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಕಾಲೇಜಿನ ಟ್ರಸ್ಟಿ ಎನ್.ಎನ್.ನಂಜಪ್ಪ, ಆಡಳಿತ ಅಧಿಕಾರಿ ಮಹೇಶ್ ಅಮೀನ್ ಇದ್ದರು.
ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲರಾದ ಲಿಖಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು. ಉಪನ್ಯಾಸಕಿ ಹೇಮಾವತಿ ಅಮ್ಮನ ದಿನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ವಂದಿಸಿದರು.