ಮಡಿಕೇರಿ ಮೇ 19 : ಜನ ವಿರೋಧಿ ಆಡಳಿತವನ್ನು ನೀಡಿ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಜನರ ಗಮನವನ್ನು ಬೇರೆಡೆ ಸೆಳೆದು ರಾಜಕಾರಣ ಮಾಡುತ್ತಿದ್ದ ಬಿಜೆಪಿ ಪಕ್ಷಕ್ಕೆ ಮತದಾರರು ಈ ಬಾರಿ ಸರಿಯಾದ ಪಾಠವನ್ನು ಕಲಿಸಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಬಾಷಾ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮತದಾರರು ಈ ಬಾರಿ ವಿದ್ಯಾವಂತ ಅಭ್ಯರ್ಥಿಗಳಾದ ಡಾ.ಮಂತರ್ ಗೌಡ ಹಾಗೂ ಪೊನ್ನಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ನೂತನ ಶಾಸಕ ಮಂತರ್ ಗೌಡ ಅವರು ಅಭಿವೃದ್ಧಿಯ ಕುರಿತು ತಮ್ಮದೇ ಆದ ಯೋಚನೆ ಮತ್ತು ಯೋಜನೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದoತೆ ಸರ್ವರನ್ನು ಒಂದಾಗಿ ಕಾಣುವ ಮನೋಭಾವದೊಂದಿಗೆ ಸಮಾಜವನ್ನು ಒಗ್ಗಟ್ಟಾಗಿ ಮುನ್ನಡೆಸಬಲ್ಲ ಶಕ್ತಿ ಮತ್ತು ಸಾಮರ್ಥ್ಯ ಇವರಿಗೆ ಎಂದು ಹೇಳಿದ್ದಾರೆ.
ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಆಡಳಿತ ಅಲ್ಪಸಂಖ್ಯಾತ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಕಲೀಲ್ ಬಾಷಾ ಹಾಗೂ ಅಬ್ದುಲ್ ರಜಾಕ್ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯತ್ವ ನೀಡಬೇಕೆನ್ನುವ ಹಲವು ವರ್ಷಗಳ ಬೇಡಿಕೆಯನ್ನು ಈ ಬಾರಿಯಾದರು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನೂತನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರುಗಳು ಹೇಳಿದ್ದಾರೆ.









