ಮಡಿಕೇರಿ ಮೇ 20: ಈ ಬಾರಿಯ ಮಳೆಗಾಲದಲ್ಲಿ ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಪ್ರವಾಹ ಅಥವಾ ಭೂಕುಸಿತ ಆತಂಕ ಇರುವುದಿಲ್ಲ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ. ಹೆಚ್ ಎಸ್ ಎಂ ಪ್ರಕಾಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮುನ್ಸೂಚನೆ ಮಾಹಿತಿ ನೀಡಿದ್ದು, 2023ನೇ ವರ್ಷದ ಮುಂಗಾರು ಅವಧಿಯ ಮಳೆ ವಿಷಯದಲ್ಲಿ ಮೀಟಿಯೋರಲಜಿ ಅಧ್ಯಯನ ಆಧಾರದ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಾರಿ ಸಾಮಾನ್ಯ ಮುಂಗಾರು ಗಿಂತಲೂ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ಭಾರತದ ಸುತ್ತಮುತ್ತಲು ಇರುವ ನೆಲದ ಮೇಲಿನ ಹಾಗೂ ಸಮುದ್ರದ ಒಳಗಿನ ಹಲವಾರು ದೊಡ್ಡ ಪ್ರಮಾಣದ ಜ್ವಾಲಾಮುಖಿಗಳು ಸದ್ಯದಲ್ಲಿ ನಿಷ್ಕ್ರಿಯವಾಗಿವೆ. ಇದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. 2017 ರಿಂದ 3 ವರ್ಷಗಳ ಅವಧಿಯಲ್ಲಿ ಇವುಗಳು ಅತಿ ಹೆಚ್ಚಿನ ಮಟ್ಟದಲ್ಲಿ ಸಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ.
ಸದ್ಯದ ಮಟ್ಟಿನಲ್ಲಿ ಇವುಗಳು ಸಕ್ರಿಯವಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದ ಹಲವು ಜ್ವಾಲಾಮುಖಿಗಳು ಸದ್ಯದಲ್ಲಿ ನಿಷ್ಕ್ರಿಯವಾಗಿದ್ದು ಉತ್ತರ ಭಾರತ ಸೇರಿದಂತೆ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ ಕಂಡು ಬರುತ್ತಿದೆ. ಜುಲೈ ಆಗಸ್ಟ್ ನಲ್ಲಿ ಒಂದೆರಡು ಬಾರಿ ಹೆಚ್ಚಿನ ಮಳೆಯಾದರೂ ಒಟ್ಟಾರೆ ಈ ವರ್ಷ ಆತಂಕದ ವಾತಾವರಣ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಯೋಮೀಟರಾಲಜಿ ಅಧ್ಯಯನದ ಆಧಾರದ ಮೇಲೆ ಕಳೆದ ನಾಲ್ಕು ವರ್ಷಗಳಿಂದಲೂ ಕೊಡಗು ಕೇರಳ ಪ್ರಾಂತ್ಯದ ಬಗ್ಗೆ ನಿಖರವಾಗಿ ಮುನ್ಸೂಚನೆ ನೀಡಲಾಗುತ್ತಿದೆ ಎಂದು ಎಚ್ ಎಸ್ ಎಂ ಪ್ರಕಾಶ್ ತಿಳಿಸಿದ್ದಾರೆ.








