ಮಡಿಕೇರಿ ಮೇ 29 : ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧ ಮಾಹಿತಿ ಪಡೆದು ಮಾತನಾಡಿದರು.
ಡೆಂಗಿ, ಚಿಕನ್ ಗುನ್ಯ, ಮಲೇರಿಯ ಮತ್ತಿತರ ಸಾಂಕ್ರಾಮಿಕ ರೋಗ ತಡೆಯುವಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಶಾಲೆಗಳು, ಕಚೇರಿಗಳು, ಇತರೆ ಎಲ್ಲೆಡೆ ನೀರಿನ ಟ್ಯಾಂಕ್‍ನ್ನು ಆರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕಳೆದ ಮೂರು ತಿಂಗಳಲ್ಲಿ 25 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಆರೋಗ್ಯಯುತರಾಗಿದ್ದಾರೆ ಎಂದರು. ಮನೆಯ ಸುತ್ತಮುತ್ತ ಪರಿಸರ ಶುಚಿತ್ವ ಕಾಪಾಡಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.
ರಾಷ್ಟ್ರೀಯ ಅತಿಸಾರ ಭೇಧಿಯ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಸಂಬಂಧಿಸಿದಂತೆ ಮಾಹಿತಿ ನೀಡಿದ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಚಿಕ್ಕಮಕ್ಕಳಲ್ಲಿ ಅತಿಸಾರ ಭೇಧಿ ನಿಯಂತ್ರಿಸುವುದು ಮತ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಚಿಕ್ಕ ಮಕ್ಕಳಲ್ಲಿ ಪದೇ ಪದೇ ಭೇಧಿ ಕಂಡು ಬರುತ್ತದೆ. ಆದ್ದರಿಂದ ಓಆರ್‍ಎಸ್ ಮತ್ತು ಜಿಂಕ್‍ನ್ನು ಉಪಯೋಗಿಸಬೇಕಿದೆ. ಸ್ವಚ್ಛತೆಗೆ ಗಮನಹರಿಸಬೇಕಿದೆ. ಕೈತೊಳೆಯುವ ವೈಜ್ಞಾನಿಕ ವಿಧಾನವನ್ನು ಮಕ್ಕಳಲ್ಲಿ ಅರಿವು ಮೂಡಿಸುವುದು, ನಗರ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ತಂಡಗಳ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದರು.
ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಕೈತೊಳೆಯುವ ವೈಜ್ಞಾನಿಕ ವಿಧಾನ ತಿಳಿಸುವ ಪೋಸ್ಟರ್ ಮತ್ತು ಗೋಡೆ ಬರಹಗಳನ್ನು ಶಾಲೆಯಲ್ಲಿ ಅಳವಡಿಸುವುದು, ಕೈ ತೊಳೆಯುವ ಮಹತ್ವ ಮತ್ತು ಅದರ ಲಾಭಗಳ ಬಗ್ಗೆ ಮಾಹಿತಿ ನೀಡಿದರು.
ಶಿಶುಗಳಿಗೆ 6 ತಿಂಗಳವರೆಗೆ ಎದೆಹಾಲು ಕೊಡುವುದು ಕಡ್ಡಾಯ. 6 ತಿಂಗಳಿಂದ 2 ವರ್ಷದವರೆಗೆ ಎದೆ ಹಾಲಿನ ಜೊತೆಗೆ ಪೂರಕ ಆಹಾರ ಕೊಡುವುದು, ಅತಿಸಾರ ಭೇಧಿ ತಡೆಗಟ್ಟುವಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವುದು, ಸಾಬೂನಿನಿಂದ ಕೈತೊಳೆಯುವುದು, ಅತಿಸಾರ ಭೇಧಿಯಿಂದ ದೇಹದಲ್ಲಿ ಪೋಷಕಾಂಶದಲ್ಲಿ ಕೊರತೆ, ಆರೋಗ್ಯದಲ್ಲಿ ಕ್ಷೀಣತೆ, ಅಪೌಷ್ಠಿಕತೆ, ರೋಗ ನಿರೋಧಕ ಶಕ್ತಿ ಕುಂದುವಿಕೆ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡುವಲ್ಲಿ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಎಲ್ಲಾ ಕಚೇರಿಗಳಲ್ಲಿ ತಂಬಾಕು ಮುಕ್ತ ವಲಯ ಎಂದು ನಾಮಫಲಕ ಅಳವಡಿಸಲಾಗಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಸೂಚಿಸಿದರು.
ತಂಬಾಕು ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ 6ಬಿ ಕಾಯ್ಡೆಯ ಅನುಷ್ಠಾನ ಕುರಿತು ಅರಿವು ಮೂಡಿಸಬೇಕು. ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ತಂಬಾಕು ಮುಕ್ತ ಕಾಲೇಜು ಎಂದು ಮಾಡುವಲ್ಲಿ ಶ್ರಮಿಸಬೇಕು ಎಂದರು.
ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಸಮನ್ವಯ ಸಮಿತಿ ಸಭೆ ನಡೆಸಬೇಕು. ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕೋಪ್ಟಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಕೋಪ್ಟಾ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಸೆಕ್ಷನ್ 5 ಮತ್ತು 7 ನ್ನು ಅನುಷ್ಠಾನಗೊಳಿಸುವುದು. ವಿಶ್ವ ತಂಬಾಕು ರೈತ ದಿನಾಚರಣೆ ಬಗ್ಗೆ ಪುನಿತಾ ರಾಣಿ ಮಾಹಿತಿ ನೀಡಿದರು.
ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಅವರು ಕೋಪ್ಟಾ ಕಾಯ್ದೆ ನಿಯಂತ್ರಣ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್, ಡಾ.ಚೇತನ್, ಡಾ.ಅನಿಲ್ ಧವನ್, ಡಾ.ಸೋಮಶೇಖರ್ ಮತ್ತು ಡಾ.ಕುಸ್ವಂತ್ ಕೋಳಿಬೈಲು ಇತರರು ಹಲವು ಮಾಹಿತಿ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು, ಬಿಸಿಎಂ ಇಲಾಖೆ ಅಧಿಕಾರಿ ಎನ್.ಮಂಜುನಾಥ್, ಇತರರು ಇದ್ದರು.