ಮಡಿಕೇರಿ ಜೂ.3 : ಕೊಡಗು ಜಿಲ್ಲೆಯಲ್ಲಿ ಕನಸಾಗಿಯೇ ಉಳಿದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲೆಯ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕೊಡವ ರೈಡರ್ಸ್ ಕ್ಲಬ್ ಒತ್ತಾಯಿಸಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನೇಮಕಗೊಂಡು, ಸಂಪುಟ ದರ್ಜೆಯ ಸಚಿವ ಸ್ಥಾನ ಪಡೆದಿರುವ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾದ ಕೊಡವ ರೈಡರ್ಸ್ ಕ್ಲಬ್ ಪ್ರಮುಖರು ಸಂಸ್ಥೆಯ ಪರವಾಗಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ನಂತರ ಜಿಲ್ಲಾಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಕ್ಲಬ್‍ನ ಪ್ರಮುಖರು ಕೊಡಗು ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತಕ್ಷಣವೇ ತೆರೆದು ಜಿಲ್ಲೆಯ ಜನರ ಪ್ರಾಣ ರಕ್ಷಣೆ ಮುಂದಾಗಬೇಕೆಂದು ಮನವಿ ಮಾಡಿದರು.
ಕೊಡಗಿನ ಪ್ರಮುಖ ಬೆಳೆಗಳಾದ ಭತ್ತ, ಕಾಫಿ ಹಾಗೂ ಕರಿಮೆಣಸಿನ ಬೆಳೆಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಒತ್ತಾಯ ಹೇರಬೇಕು ಎಂಬ ಮನವಿ ಸಲ್ಲಿಸಿದರು.
ಈ ಸಂದರ್ಭ ಕ್ಲಬ್ ನ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಗಾನ ಸುಬ್ಬಯ್ಯ, ಪ್ರಮುಖರಾದ ಮುರುವಂಡ ಸುಮಾ ಕುಟ್ಟಪ್ಪ, ಮೂಕಚಂಡ ಶಾಮ್ ಸೇರಿದಂತೆ ಇತರರು ಹಾಜರಿದ್ದರು.