ಮಡಿಕೇರಿ ಜೂ.21 : ನಗರದ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಭವನವನ್ನು ನಿರ್ಮಿಸುವಂತೆ ಪ್ರೊ. ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರ ನೇತೃತ್ವದಲ್ಲಿ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಶಾಸಕರಿಗೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಹಾಗೂ ಸಮಾಜ ಕಲ್ಯಾಣಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು.
ಭಾರತದ ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಸಾಧನೆ ಅಜರಾಮರವಾಗಿದ್ದು, ಜೀವನದ ಪ್ರತಿಕ್ಷಣವನ್ನು ಶೋಷಿತರ ಧ್ವನಿಯಾಗಿ ಕಳೆದವರು. ಅಂಬೇಡ್ಕರ್ ಅವರನ್ನು ವಿಶ್ವವೇ ಹಾಡಿ ಹೊಗಳಿದರೂ ಜಿಲ್ಲಾ ಮತ್ತು ತಾಲೂಕು ಕಚೇರಿ ಮುಂಭಾಗ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸರ್ಕಾರದ ಅನುದಾನದಲ್ಲಿ ಪುತ್ಥಳಿ ಹಾಗೂ ಭವನವನ್ನು ನಿರ್ಮಾಣ ಮಾಡದೇ ಇರುವುದು ಸಂವಿಧಾನ ಶಿಲ್ಪಿಗೆ ಅಗೌರವ ತೋರಿದಂತೆ ಎಂದರು.
ಆದ್ದರಿಂದ ಶೀಘ್ರವೇ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಜಿಲ್ಲಾಧಿಕಾರಿಗಳ ಕಟ್ಟಡದ ಆವರಣದಲ್ಲಿ ಹಾಗೂ ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ ತಾಲೂಕುಗಳಲ್ಲಿ ಮತ್ತು ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಮಡಿಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ, ಗೌರವಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಜೇಮ್ಸ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿಯರಾದ ಭಾಗ್ಯವತಿ, ಶಶಿಕಲಾ, ವಿರಾಜಪೇಟೆ ತಾಲೂಕು ಸಂಚಾಲಕ ಮನು, ಸಂಘಟನಾ ಸಂಚಾಲಕರುಗಳಾದ ರಘು, ಬೋಜ, ಕುಳಿಯ, ಬಾರಿಕಾಡು ಗ್ರಾಮ ಸಂಚಾಲಕರಾದ ವೈ.ಆರ್.ಮಂಜು, ಸರಸು, ಮಂಜುಳಾ, ಬೆಳ್ಳಿ ಮತ್ತಿತರರು ಹಾಜರಿದ್ದರು.









