ಮಡಿಕೇರಿ ಜೂ.25 : ಮುಂಗಾರು ಕ್ಷೀಣವಾಗಿ ಜೀವನದಿ ಕಾವೇರಿಯ ಒಡಲು ಬತ್ತಿದ್ದು, ಜಿಲ್ಲೆಯ ಏಕೈಕ ಪ್ರಮುಖ ಜಲಾಶಯ ಬರಡಾಗಿದೆ. ಡೆಡ್ ಸ್ಟೋರೆಜ್ ನ ಆತಂಕಕಾರಿ ಸ್ಥಿತಿ ಹಾರಂಗಿಯಲ್ಲಿದ್ದು, ಈ ಭಾಗದ ಕೃಷಿಕ ವರ್ಗ ಕಂಗಾಲಾಗಿದೆ.
ಲಕ್ಷಾಂತರ ಕೃಷಿಕರಿಗೆ ನೀರುಣಿಸುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ, ನಾಡಿನಲ್ಲಿ ಸುಭಿಕ್ಷೆ ಮೂಡಬೇಕಾದರೆ ಕಾವೇರಿಯ ಒಡಲು ತುಂಬಿ, ಹಾರಂಗಿ ಭರ್ತಿಯಾಗುವುದು ಅನಿವಾರ್ಯ. ಮುಂಗಾರು ಮಳೆೆಯ ನಿರೀಕ್ಷೆಯಲ್ಲಿಯೇ ಜೂನ್ ತಿಂಗಳ ನಾಲ್ಕನೇ ವಾರ ಸರಿದು ಹೋಗುತ್ತಿದ್ದು, ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಲ್ಲಿ ಹನಿ ಮಳೆಯಷ್ಟೇ ಆಗುತ್ತಿದೆ.
ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸುರಿಯುವ ಮಳೆ ಕಾವೇರಿಯ ಒಡಲು ತುಂಬುತ್ತದೆ. ವಿರಾಜಪೇಟೆ ವಿಭಾಗದ ಮಳೆ ಲಕ್ಷ್ಮಣ ತೀರ್ಥವನ್ನು ಸೇರಿ ಕಾವೇರಿಯನ್ನು ಸಂಧಿಸುತ್ತದೆ. ಇತ್ತ ಸೋಮವಾರಪೇಟೆಯ ಮಾದಾಪುರ ವಿಭಾಗದಲ್ಲಿ ಸುರಿಯುವ ಮಳೆ ಹಾರಂಗಿ ಹೊಳೆಯನ್ನು ಉಕ್ಕಿಸಿ, ಹಾರಂಗಿ ಜಲಾಶಯವನ್ನು ಭರ್ತಿ ಮಾಡುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ ಹರಡಿದಂತೆ ಅಲ್ಲಲ್ಲಿ ಕೊಂಚ ಮಳೆಯಾಗುತ್ತಿದೆ. ಕೆಆರ್‌ಎಸ್ ಭರ್ತಿಯಾಗಬೇಕಾದರೆ ಕೊಡಗಿನಲ್ಲಿ ಉತ್ತಮ ಮುಂಗಾರು ಇರಬೇಕು. ಪ್ರತಿ ವರ್ಷದಂತೆ ಜೂನ್ ತಿಂಗಳಿನಲ್ಲೇ ಮಳೆ ಆರಂಭಗೊಂಡಿದ್ದರೆ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುವುದರೊಂದಿಗೆ, ಹಾರಂಗಿ ಜಲಾಶಯವೂ ಸಾಕಷ್ಟು ತುಂಬಿಕೊಳ್ಳುತ್ತಿತ್ತು. ಕೆಆರ್‌ಎಸ್‌ನತ್ತ ದೊಡ್ಡ ಪ್ರಮಾಣದ ನೀರು ಹರಿದು ಹೋಗುತಿತ್ತು. ಆದರೆ, ಈ ಬಾರಿ ಪ್ರಕೃತಿ ಮುನಿಸಿಕೊಂಡಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ 8.5 ಟಿಎಂಸಿ ಗರಿಷ್ಠ ಜಲಧಾರಣಾ ಸಾಮರ್ಥ್ಯ ಹೊಂದಿದೆ. 2859 ಅಡಿಗಳ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 2819.05 ಅಡಿಗಳಷ್ಟೆ ಇದ್ದು, ನೀರಿನ ಪ್ರಮಾಣ ಕೇವಲ 2.58 ಟಿಎಂಸಿಗೆ ತಲುಪಿದ್ದು, ಇದು ಬಹುತೇಕ ‘ಡೆಡ್ ಸ್ಟೋರೇಜ್’ ಹಂತಕ್ಕೆ ತಲುಪಿದೆ. ಕಳೆದ 2022 ನೇ ಸಾಲಿನಲ್ಲಿ ಇದೇ ಸಮಯ ಜಲಾಶಯದ ಮಟ್ಟ 2852.07 ಅಡಿಗಳಾಗಿತ್ತು ಮತ್ತು 6.37 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಅಂಕಿ ಅಂಶ ಪ್ರಸ್ತುತ ಕೊಡಗಿನ ಮುಂಗಾರಿನ ಪರಿಸ್ಥಿತಿಗಳನ್ನು ನಿಚ್ಚಳವಾಗಿ ತೋರಿಸಿಕೊಡುತ್ತಿದೆ.
ಮಳೆಯ ಅಭಾವದಿಂದ ಹಾರಂಗಿ ಜಲಾಶಯದ ಒಳ ಹರಿವು ಕೇವಲ 168 ಕ್ಯುಸೆಕ್ ಇದೆ. ನೀರಿಲ್ಲದೆ ಬರಿದಾಗಿರುವ ಜಲಾಶಯದಲ್ಲಿ ಸದಾ ನೀರಿನಲ್ಲಿ ಮುಳುಗಿರುತ್ತಿದ್ದ ಬಂಡೆಗಳ ದರ್ಶನವಾಗುತ್ತಿದೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಮಳೆಗಾಲದ ಈ ಸಮಯದಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿ, ಜುಲೈನಲ್ಲಿ ಜಲಾಶಯ ಭರ್ತಿಯೊಂದಿಗೆ 5 ರಿಂದ 10 ಸಾವಿರ ಕ್ಯುಸೆಕ್ ನೀರು ಕೆಆರ್‌ಎಸ್‌ನತ್ತ ಹರಿದು ಹೋಗುತಿತ್ತು.
ಜಲಾಶಯದ ಕ್ರೆಸ್ಟ್ ಗೇಟಿನ ಮಟ್ಟಕ್ಕಿಂತಲೂ ನೀರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಈ ನೀರು ರೈತರಿಗಾಗಲೀ ಅಥವಾ ಸೋಮವಾರಪೇಟೆ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
::: ಉಪಯುಕ್ತ ಜಲಾಶಯ :::
ಹಾರಂಗಿ ಜಲಾಶಯದ ನೀರನ್ನು ಕೊಡಗಿನ ಹೆಬ್ಬಾಲೆ, ಶಿರಂಗಾಲ, ತೊರೆನೂರು ವಿಭಾಗಗಳ ರೈತರಷ್ಟೆ ಬಳಕೆ ಮಾಡುತ್ತಾರೆ. ಉಳಿದಂತೆ ಹೆಚ್ಚಿನ ನೀರು ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗ್ರಾಮಿಣ ಭಾಗಗಳಲ್ಲಿ ಬಳಕೆಯಾಗುತ್ತದೆ. ಉತಮ್ತ ಮಳೆಯಾಗಿ ಹಾರಂಗಿ ಭರ್ತಿಯಾದರೆ ಕೊಡಗಿನವರಿಗಿಂತಲೂ ಹೊರ ಜಿಲ್ಲೆಯವರಿಗೇ ಹೆಚ್ಚು ಲಾಭ. ಆದ್ದರಿಂದ ಕೊಡಗಿನಲ್ಲಿ ಮಳೆಯಾಗಲಿ ಎಂದು ಅಕ್ಕಪಕ್ಕದ ಜಿಲ್ಲೆಯವರೂ ಬಯಸುತ್ತಾರೆ.
::: ಪ್ರವಾಸಿಗರಿಗೆ ನಿರಾಶೆ :::
ಪ್ರಕೃತಿದತ್ತವಾದ ಪ್ರವಾಸಿತಾಣಗಳಿಂದಲೇ ಪ್ರಸಿದ್ಧಿ ಪಡೆದಿರುವ ಕೊಡಗು ಮಾನ್ಸೂನ್ ಪ್ರವಾಸೋದ್ಯಮದ ಮೂಲಕವೂ ಖ್ಯಾತಿ ಗಳಿಸಿದೆ. ಮಳೆಗಾಲದಲ್ಲಿ ನದಿ ತೊರೆಗಳು, ಜಲಪಾತಗಳು ಮತ್ತು ಜಲಾಶಯಗಳು ತುಂಬಿ ಹರಿಯುವ ದೃಶ್ಯ ಮನಮೋಹಕವಾಗಿರುತ್ತದೆ. ಇದು ಪ್ರವಾಸಿಗರಿಗೆ ಹೆಚ್ಚು ಅಚ್ಚುಮೆಚ್ಚು, ಇದೇ ಕಾರಣಕ್ಕೆ ಜೂನ್ ತಿಂಗಳಿನಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುತ್ತದೆ. ಆದರೆ ಪ್ರಸ್ತುತ ವರ್ಷ ಮಳೆ ಕ್ಷೀಣಿಸಿರುವುದರಿಂದ ಪ್ರವಾಸಿತಾಣಗಳು ಕೂಡ ಸೊರಗಿದಂತ್ತಿದ್ದು, ಪ್ರವಾಸಿಗರು ನಿರಾಶೆಯಿಂದ ಮರಳುತ್ತಿದ್ದಾರೆ.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*