ಮಡಿಕೇರಿ ಜೂ.28 : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2023-24 ನೇ ಸಾಲಿನಲ್ಲಿಯೂ ಜಾರಿಯಲ್ಲಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಬನಾ ಎಂ.ಶೇಕ್ ತಿಳಿಸಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳಿದ್ದಾರೆ.
ಈ ಯೋಜನೆಯಡಿಯಲ್ಲಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿದೆ ಎಂದು ವಿವರಿಸಿದ್ದಾರೆ.
ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಕೃಷಿ ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಭ್ಯವಿದ್ದು, ಈ ಯೋಜನೆಯಡಿ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
2023 ನೇ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ: ಭತ್ತ (ನೀರಾವರಿ) ಸಾಮಾನ್ಯ ವಿಮಾ ಮೊತ್ತ (ರೂ.ಗಳಲ್ಲಿ) ರೂ.93,250, ರೈತರ ವಿಮಾ ಕಂತು(ಶೇ.) 2, ರೈತರ ವಿಮಾಕಂತು ಮೊತ್ತ ರೂ.1865. ನೋಂದಾಯಿಸಿಕೊಳ್ಳಲು ಆಗಸ್ಟ್, 16 ಕೊನೆಯ ದಿನವಾಗಿದೆ.
ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ ರೂ.63,750, ರೈತರ ವಿಮಾ ಕಂತು(ಶೇ.) 2, ರೈತರ ವಿಮಾ ಕಂತು ಮೊತ್ತ ರೂ.1275, ನೋಂದಾಯಿಸಿಕೊಳ್ಳಲು ಆಗಸ್ಟ್, 31 ಕೊನೆಯ ದಿನವಾಗಿದೆ.
ಮುಸುಕಿನ ಜೋಳ(ಮಳೆಯಾಶ್ರಿತ) ವಿಮಾ ಮೊತ್ತ ರೂ.56,500, ರೈತರ ವಿಮಾ ಕಂತು(ಶೇ.) 2, ರೈತರ ವಿಮಾ ಕಂತು ಮೊತ್ತ ರೂ.1,130. ನೋಂದಾಯಿಸಿಕೊಳ್ಳಲು ಜುಲೈ, 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಕೃಷಿ ವಿಮಾ ಕಂಪನಿಯ ದೂ.ಸಂ. 18004250505, ವಿಮಾ ಕಂಪನಿಯ ಪ್ರತಿನಿಧಿಗಳಾದ ಸ್ಮಿತಾ ಸಿ.ಡಿ, ದೂರವಾಣಿ ಸಂ: 7019969942 ಹಾಗೂ ಸತೀಶ್ ಎಚ್.ಆರ್ ದೂರವಾಣಿ ಸಂ: 8618234069 ಸಂಪರ್ಕಿಸಬಹುದು. ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು.
ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ http://www.samrakshane.karnataka.gov.in/ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಹಾಗೂ ಈ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಶೇಖ್ ತಿಳಿಸಿದ್ದಾರೆ.