ಮಡಿಕೇರಿ ಜು.11 : ಕೊಡಗು ಜಿಲ್ಲೆಯಲ್ಲಿ ರಿವರ್ ರ‍್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಿವರ್ ರ‍್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು.
ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರು ದುಬಾರೆ, ಬರಪೊಳೆ, ಕುಮಾರಳ್ಳಿ, ಮಾಂದಲ್‍ಪಟ್ಟಿ, ಅಬ್ಬಿ ಜಲಪಾತ, ರಾಜಾಸೀಟು ಹೀಗೆ ವಿವಿಧ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸಲಿದ್ದಾರೆ. ಪ್ರವಾಸಿಗರಿಗೆ ಯಾವುದೇ ರೀತಿಯ ಕಹಿ ಘಟನೆ ಉಂಟಾಗದಂತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದರೆ ಇಡೀ ಕೊಡಗು ಜಿಲ್ಲೆಗೆ ಕೆಟ್ಟ ಹೆಸರು ಬರಲಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ತೊಂದರೆಯಾಗಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಜೊತೆಗೆ ಸೌಜನ್ಯ, ವಿನಯ, ವಿನಮ್ರತೆಯಿಂದ ನಡೆದುಕೊಳ್ಳಬೇಕು. ಇದರಿಂದ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯ. ಇದರಿಂದ ಉದ್ಯೋಗಗಳು ಹೆಚ್ಚಾಗಲಿದೆ ಎಂದು ತಿಳಿಸಿದರು.
ರಿವರ್ ರ್ಯಾಪ್ಟಿಂಗ್ ಸಂಬಂಧಿಸಿದಂತೆ ಪರವಾನಿಗೆ ನೀಡುವುದು, ಪರವಾನಿಗೆ ನವೀಕರಣ ಮಾಡುವುದು ಈ ಎಲ್ಲಾ ಕಾರ್ಯಗಳನ್ನು ನಿಯಮಾನುಸಾರ ಮಾಡಲಾಗುವುದು. ರಿವರ್ ರ‍್ಯಾಪ್ಟಿಂಗ್ ಅನುಮತಿ ಪಡೆದಿರುವವರು ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕು. ಯಾವುದೇ ನಿಯಮವನ್ನು ಉಲ್ಲಂಘಿಸಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಪ್ರವಾಸಿ ಸ್ಥಳಗಳಲ್ಲಿ ಸುರಕ್ಷತೆ, ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಮತ್ತಿತರ ಮೂಲ ಸೌಲಭ್ಯಗಳು ಅತ್ಯಗತ್ಯವಾಗಿಬೇಕಿದೆ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮ ರೂಪಿಸಲಿದೆ ಎಂದರು.
ರಿವರ್ ರ್ಯಾಪ್ಟಿಂಗ್ ಸಂಬಂಧಿಸಿದಂತೆ ಈಗಾಗಲೇ ನಿಗದಿ ಮಾಡಿರುವ ದರದಂತೆ ಮುಂದುವರೆಸಬೇಕು. ರಿವರ್ ರ‍್ಯಾಪ್ಟಿಂಗ್ ಹಾಗೂ ಪ್ರವಾಸಿ ಸ್ಥಳಗಳು ಸಂಬಂಧಿಸಿದಂತೆ ವೆಬ್‍ಸೈಟ್‍ನಲ್ಲಿ ದಾಖಲಿಸಿ ಮಾಹಿತಿ ದೊರೆಯುವಂತಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ಇತ್ತೀಚೆಗೆ ಅಬ್ಬಿಜಲಪಾತ ಬಳಿ ಪ್ರವಾಸಿಗರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿತ್ತು, ಇಂತಹ ಅಹಿತಕರ ಘಟನೆಗಳು ನಡೆಯಬಾರದು. ನಡೆದಲ್ಲಿ ಪೊಲೀಸ್ ಇಲಾಖೆ ನಿಯಮಾನುಸಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಪ್ರವಾಸಿಗರ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಯಾವುದೇ ರೀತಿಯ ದುರ್ನಡತೆಯಿಂದ ನಡೆದುಕೊಳ್ಳಬಾರದು. ರೌಡಿಸಂ ಮಾಡುವುದು ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.
ದುಬಾರೆಯ ರತೀಶ್ ಅವರು ಮಾತನಾಡಿ ರಿವರ್ ರ್ಯಾಪ್ಟಿಂಗ್‍ನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಿಕೊಂಡು ಹೋಗಲಾಗುತ್ತದೆ. 73 ರಿವರ್ ರ್ಯಾಪ್ಟ್ ಕಾರ್ಯ ಚಟುವಟಿಕೆಗಳು ನಡೆಸುತ್ತಿವೆ. ದುಬಾರೆಗೆ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಲಿದ್ದು, ವಾಹನ ಪಾರ್ಕಿಂಗ್ ವ್ಯವಸ್ಥೆ ಆಗಬೇಕಿದೆ ಎಂದರು. ರತನ್ ಅವರು ಮಾತನಾಡಿ ಬರಪೊಳೆಯಲ್ಲಿ ಅಗತ್ಯ ಮೂಲ ಸೌಲಭ್ಯ ಹೆಚ್ಚಿಸಬೇಕೆಂದು ಮನವಿ ಮಾಡಿದರು.
ರಿವರ್ ರ್ಯಾಪ್ಟಿಂಗ್ ನಡೆಸುವ ನಿಟ್ಟಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ(ಜೇತ್ನ) ಮುಖ್ಯ ಪ್ರಶಿಕ್ಷಕರಾದ ದಿನೇಶ್ ಅವರು ಹೇಳಿದರು.
ಜಲಸಾಹಸ ಕ್ರೀಡೆ, ಶಿಲಾರೋಹಣ, ಕ್ರೀಡಾರೋಹಣ ಹೀಗೆ ವಿವಿಧ ರೀತಿಯ ತರಬೇತಿಯನ್ನು ‘ಜೇತ್ನ’ ವತಿಯಿಂದ ನೀಡಲಾಗುತ್ತಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಬರಪೊಳೆಯಲ್ಲಿ ಜಲಸಾಹಸ ಕ್ರೀಡೆಯ ತರಬೇತಿ ನೀಡಲಾಗುವುದು ಎಂದು ಹೇಳಿದರು. ಹಾಗೆಯೇ ಬೋಟ್‍ಗಳ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದರು. ನಂಜರಾಯಪಟ್ಟಣ ಪಿಡಿಒ ಅವರು ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡುವಂತಾಗಬೇಕು ಎಂದು ಕೋರಿದರು.
ಹೋಟೆಲ್, ರೆಸಾರ್ಟ್ ಅಸೋಷಿಯೇಷನ್ ಅವರ ಜೊತೆ ಚರ್ಚೆ :ಬಳಿಕ ಹೋಟೆಲ್, ರೆಸಾರ್ಟ್ ಅಸೋಷಿಯೇಷನ್ ಅವರ ಜೊತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯಲ್ಲಿ ನೋಂದಣಿಯಾಗಿರುವ ಎಲ್ಲಾ ಹೋಂ ಸ್ಟೇ ರೆಸಾರ್ಟ್‍ಗಳ ಮಾಹಿತಿ ಒಂದೆಡೆ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಲಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ರೆಸಾರ್ಟ್‍ಗಳು ಅನಧಿಕೃತ ಚಟುವಟಿಕೆಯಲ್ಲಿ ನಡೆಯದಂತೆ ಗಮನಹರಿಸಬೇಕು. ಇಂತಹ ಘಟನೆಗಳು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಮಸ್ಯೆಗಳಿದ್ದಲ್ಲಿ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಹೋಂ ಸ್ಟೇ ಅಸೋಷಿಯೇಷನ್‍ನ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ನೋಂದಾಯಿತ ಹೋಂ ಸ್ಟೇಗಳಿದ್ದು, ಹೋಂ ಸ್ಟೇ ನೋಂದಣಿ ಸರಳೀಕರಣ ಮಾಡಬೇಕು. ಇದರಿಂದ ಹೆಚ್ಚಿನ ಜನರು ನೋಂದಣಿ ಮಾಡಲು ಸಹಕಾರಿಯಾಗಲಿದೆ ಎಂದರು.
ಅಗತ್ಯ ಇರುವ ಕಡೆಗಳಲ್ಲಿ ‘ಪ್ರವಾಸಿ ಮಾಹಿತಿ ಕೇಂದ್ರ’ಗಳನ್ನು ತೆರೆಯುವಂತಾಗಬೇಕು. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಪ್ರವಾಸಿ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವಾರಾಂತ್ಯದಲ್ಲಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಅಬಕಾರಿಯಿಂದ ಹೆಚ್ಚಿನ ಆದಾಯ ಬರುತ್ತಿದ್ದು, ಪ್ರವಾಸಿ ಸ್ಥಳಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಅವರು ಮಾತನಾಡಿ ಪ್ರವಾಸಿಗರು ಎಲ್ಲೆಂದರಲ್ಲಿ ಅಡುಗೆ ಮಾಡುತ್ತಾರೆ. ಇದರಿಂದಾಗಿ ಅಡುಗೆ ಮಾಡಲು ಸ್ಥಳ ನಿಗದಿ ಮಾಡಬೇಕು ಎಂದು ಕೋರಿದರು.
ಕೊಡಗು ಬ್ರಾಂಡೆಡ್ ಹೆಸರಿನಲ್ಲಿ ಜೇನು, ವೈನ್, ಸಾಂಬಾರು ಪದಾರ್ಥಗಳು ನಕಲಿಯಾಗಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ಮಾಡಿದರು.
ಸೋಮವಾರಪೇಟೆ ತಾಲ್ಲೂಕು ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಸಿ.ಕೆ.ರೋಹಿತ್ ಅವರು ಕೋಟೆಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಯಾವುದೇ ಸೂಚನಾ ಫಲಕ ಇಲ್ಲ. ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸುವಂತಾಗಬೇಕು ಎಂದು ಕೋರಿದರು.
ಪುಷ್ಪಗಿರಿ ಬೆಟ್ಟಕ್ಕೆ ತೂಗುಸೇತುವೆ ನಿರ್ಮಾಣ ಮಾಡಬೇಕು. ಮಲ್ಲಳ್ಳಿ ಜಲಪಾತದಲ್ಲಿ ರೂಪ್‍ವೇ ನಿರ್ಮಾಣ ಮಾಡಬೇಕು ಎಂದರು.
ನೋಂದಣಿಯಾಗಿರುವ ಹೋಂ ಸ್ಟೇಗಳ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಳವಡಿಸಬೇಕು ಎಂದರು. ಸೋಮವಾರಪೇಟೆ ತಾಲ್ಳೂಕು ಹೋಂ ಸ್ಟೇ ಅಸೋಷಿಯೇಷನ್‍ನ ನಿಕಟಪೂರ್ವ ಅಧ್ಯಕ್ಷರಾದ ಮಲ್ಲೇಶ್, ಕಾರ್ಯದರ್ಶಿ ಅಭಿನಂದನ್, ಉಪಾಧ್ಯಕ್ಷರಾದ ಯೋಗೇಶ್, ಖಜಾಂಚಿ ಪ್ರೀತಂ, ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಚಂದನ್, ಪಿ.ಸಿ.ವಸಂತ, ಸಿ.ಎಸ್.ರತನ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕರಾದ ಜತೀನ್, ಕುಮಾರಧಾರದ ಪ್ರದೀಪ್, ಇತರರು ಇದ್ದರು.









