ಕುಶಾಲನಗರ ಆ.17 : ಹಿಂದೂ ಸಮಾಜ ಜಾಗೃತವಾದಲ್ಲಿ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ದಕ್ಷಿಣ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ ಯಾದವ್ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಜನಜಾಗೃತಿಗಾಗಿ ನಡೆದ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಭಾರತದ ಸ್ವಾತಂತ್ರ್ಯ ನಂತರ ಕೆಲವು ನಾಯಕರ ತುಷ್ಟಿಕರಣದ ನಿಲುವುಗಳು ದೇಶದ ವಿಭಜನೆಗೆ ಕಾರಣವಾಯಿತು. ಆ ದಿನಗಳಲ್ಲಿ ಹಲವರು ಪ್ರಾಣ, ಮನೆ ಕಳೆದುಕೊಳ್ಳುವಂತಾಯಿತು. ಆ ಕರಾಳ ದಿನಗಳು ಇನ್ನೂ ಮಾಸಿಲ್ಲ ನೆನಪು ಮರುಕಳಿಸುತ್ತಿದೆ, ದೇಶದ ಹಿತದ ಬಗ್ಗೆ ಚಿಂತನೆಯ ಕೊರತೆ ಇತ್ತು ಎಂದು ಹೇಳಿದರು.
ಭಾರತದ ಮೌಲ್ಯಯುತ ಗುಣ ಸಂಸ್ಕೃತಿ ಮುನ್ನೆಲೆಗೆ ಬಂದಿದೆ, ಜಗತ್ತಿಗೆ ಭಾರತ ಮಾರ್ಗದರ್ಶನ ನೀಡುತ್ತಿದೆ. ನಾವುಗಳು ಸಂಘಟಿತರಾಗಿ ಜಾಗೃತರಾದಲ್ಲಿ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದ ಅವರು ಜಗತ್ತಿಗೆ ಭಾರತ ವಿಶ್ವಗುರು ಆಗುವ ದಿನಗಳು ಸನಿಹದಲ್ಲಿದೆ ಎಂದರು.
ಸ್ವಾತಂತ್ರ್ಯ ಸಂದರ್ಭ ದೇಶದ ವಿಭಜನೆ ಪ್ರಾಕೃತಿಕವಾಗಿ ನಡೆದಿಲ್ಲ ಮತ್ತೆ ಒಂದಾಗುವುದು ಖಚಿತ ಎಂದು ಹೇಳಿದ ಯಾದವ್ ಕೃಷ್ಣ, ದೇಶ ಸಮೃದ್ಧವಾಗಬೇಕಾದಲ್ಲಿ ಬರೀ ಹಣದ ಮೂಲಕ ಅಸಾಧ್ಯ ಸಂಸ್ಕೃತಿ ಆಚರಣೆಗಳ ಮೂಲಕ ಸುಭಿಕ್ಷ ದೇಶ ಕಟ್ಟಬಹುದು ಎಂದರಲ್ಲದೆ,ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಸಂಕಲ್ಪ ಮುಂದುವರಿದಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ಮಾಜಿ ಸೈನಿಕ ಡಿ.ಕೆ.ಚಿನ್ನಪ್ಪ ಮಾತನಾಡಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಜಿತ್ ಕುಕ್ಕೇರ, ತಾಲೂಕು ಸಂಯೋಜಕ ಹರೀಶ್ ವೇದಿಕೆಯಲ್ಲಿದ್ದರು. ಸಭೆಗೂ ಮುನ್ನ ಕುಶಾಲನಗರ ಮಾರಿಯಮ್ಮ ದೇವಾಲಯದಿಂದ ಹೊರಟ ಪಂಜಿನ ಮೆರವಣಿಗೆಗೆ ಕುಶಾಲನಗರದ ಹಿರಿಯರಾದ ಜಿ.ಎಲ್. ನಾಗರಾಜ್ ಚಾಲನೆ ನೀಡಿದರು. ಪಂಜಿನ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಮಾರುಕಟ್ಟೆ ರಸ್ತೆ ಮೂಲಕ ನಂತರ ಐಬಿ ರಸ್ತೆಯಲ್ಲಿ ತೆರಳಿ ಸಭಾಂಗಣಕ್ಕೆ ಸಾಗಿತು. 600ಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ಹಿನ್ನೆಲೆಯಲ್ಲಿ ಹಿಂದೆಂದೂ ಕಾಣದ ಪೊಲೀಸ್ ಭದ್ರತೆ ಕಂಡು ಬಂತು.
ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಡಾ ಬೋರಲಿಂಗಯ್ಯ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಬೆಳಗ್ಗಿನಿಂದಲೇ ಕುಶಾಲನಗರದಲ್ಲಿ ಮೊಕ್ಕಂ ಹೂಡಿದ್ದು, ಡಿವೈಎಸ್ಪಿ, ಗಂಗಾಧರಪ್ಪ, ಜಯರಾಮ್,ನಾಲ್ಕು ಮಂದಿ ಪೊಲೀಸ್ ಇನ್ಸ್ಪೆಕ್ಟರ್ಸ್, ಜಿಲ್ಲೆಯ ವಿವಿಧ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿ ಸಲಾಗಿತ್ತು. ಹೆಚ್ಚುವರಿ ಯಾಗಿ ನಾಲ್ಕು ಕೆ ಎಸ್ ಆರ್ ಪಿ ತುಕಡಿ, ಮತ್ತು ಜಿಲ್ಲಾ ಶಸ್ತ್ರದಳದ ಪೊಲೀಸರ ನಿಯೋಜಿಸಲಾಗಿತ್ತು. ಗಡಿಭಾಗ ಆಯಕಟ್ಟಿನ ಪ್ರದೇಶಗಳಲ್ಲಿ ಮಧ್ಯಾಹ್ನದಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.