ಮಡಿಕೇರಿ ಆ.16 : ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘ, ಮಾರುಕಟ್ಟೆ ವರ್ತಕರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ನಗರದ ಮಾರುಕಟ್ಟೆ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದೇಶಭಕ್ತಿ ಗೀತೆಯ ಮೂಲಕ ಭಾರತಾಂಬೆಗೆ ನಮನ ಸಲ್ಲಿಸಲಾಯಿತು. ವರ್ತಕ, ಕೂರ್ಗ್ ಸೀ ಫುಡ್ ನ ಮಾಲೀಕ ಮಕ್ಬುಲ್ ಹಾಗೂ ಗುತ್ತಿಗೆದಾರ ಹಾಸಿಂ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಅರ್ಪಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಂ.ಯಾಕುಬ್ ದೇಶವನ್ನು ಅಭಿವೃದ್ಧಿಪಥದತ್ತ ಸಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಆ ಮೂಲಕ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.
ಮಹಾತ್ಮ ಗಾಂಧಿ ಅವರು ಅಹಿಂಸಾ ಮಾರ್ಗದ ಮೂಲಕ ಅನೇಕ ಹೋರಾಟಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇವರೊಂದಿಗೆ ಸರ್ದಾರ್ ವಲ್ಲಭಾಯಿ ಪಟೇಲ್, ಜವಹರಲಾಲ್ ನೆಹರು ಅಬ್ದುಲ್ ಕಲಾಂ ಆಜಾದ್, ಜಾಕಿರ್ ಹುಸೇನ್ ಸೇರಿದಂತೆ ಅನೇಕರು ಹೋರಾಡಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ನಾವು ಸ್ಮರಿಸಿಕೊಳ್ಳಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಒಗ್ಗಟ್ಟಿನಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ತ್ಯಾಗ ಬಲಿದಾನದ ಮೂಲಕ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಮತ್ತಷ್ಟು ಗಟ್ಟಿಗೊಳಿಸೋಣ ಎಂದರು.
ಕೊರವೇ ಆಟೋ ಚಾಲಕರ ಸಂಘದ ಅಧ್ಯಕ್ಷ ಸುಲೇಮಾನ್, ಉಪಾಧ್ಯಕ್ಷ ವರ್ಗೀಸ್, ಇಂಡಿಯನ್ ಕೇಕ್ ಹೌಸ್ ನ ಮಾಲೀಕ ಮುಸ್ತಫ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಗಾಯಕರಾದ ಭಾಷಾ, ಶಿವಣ್ಣ, ಜೋಬಿನ್, ಹಬೀಬ್ ಹಾಗೂ ಹಾರಿಸ್ ನಿರಂತರವಾಗಿ ದೇಶಭಕ್ತಿ ಗೀತೆಗಳನ್ನು ಹಾಡಿ ರಾಷ್ಟ್ರಕ್ಕೆ ಗೌರವ ಅರ್ಪಿಸಿದರು.