ಮಡಿಕೇರಿ ಆ.24 : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಗಳಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‍ಲೈನ್ ವಿಳಾಸ: kacdc.karnataka.gov.in ರ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 18 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು), ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು, ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು, ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯಲಿಂಗಿಗಳಿಗೆ ಶೇ.5 ಮೀಸಲಾತಿ ಇರಿಸಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿದೆ).
ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.3 ಲಕ್ಷಗಳ ಮಿತಿಯೊಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಲ್ಲಿ ಕನಿಷ್ಠ ರೂ.50 ಸಾವಿರಗಳಿಂದ ಗರಿಷ್ಠ ರೂ.1 ಲಕ್ಷಗಳ ಸಾಲ ಒದಗಿಸಲಾಗುವುದು.
ಈ ಮೊತ್ತದಲ್ಲಿ ಶೇ.20 ರಷ್ಟು ಸಹಾಯಧನ ಹಾಗೂ ಶೇ.80ರಷ್ಟು ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು, 2 ತಿಂಗಳ ವಿರಾಮ ಅವಧಿ ಇರುತ್ತದೆ. ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಡಿ ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್, ಸಹಕಾರಿ ಸಂಘಗಳಿಂದ ಸಾಲ ಪಡೆಯಬೇಕು ಹಾಗೂ ನಿಗಮದಿಂದ ಗರಿಷ್ಠ ರೂ.2 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.
ವಾಸವಿ ಜಲಶಕ್ತಿ ಯೋಜನೆಯಡಿ 2 ರಿಂದ 5 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಲ-ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷದ ಒಳಗಿನವರಾಗಿರಬೇಕು. ಈ ಯೋಜನೆಯಡಿ ಗರಿಷ್ಠ ರೂ.2 ಲಕ್ಷಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು ಹಾಗೂ ವಿದ್ಯುದೀಕರಣಕ್ಕಾಗಿ ರೂ.50 ಸಾವಿರಗಳ ಸಹಾಯಧನ ನೀಡಲಾಗುವುದು. 6 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಸಿಇಟಿ, ಎನ್‍ಇಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1 ಲಕ್ಷಗಳ ಸಾಲವನ್ನು ಶೇ.2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷಗಳ ಮಿತಿಯೊಳಗಿರಬೇಕು. (ಈ ಯೋಜನೆಗೆ ಸಂಬಂಧಪಟ್ಟಂತೆ ಸಿ.ಇ.ಟಿ ಪರೀಕ್ಷೆಯ ಕೌನ್ಸೆಲಿಂಗ್ ಮುಗಿದ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದು).
ವಿಶೇಷ ಸೂಚನೆ:-ಮೇಲ್ಕಾಣಿಸಿದ ಯೋಜನೆಗಳ ಮಾರ್ಗಸೂಚಿ ಹಾಗೂ ಅರ್ಹತೆಗಳ ಸಂಕ್ಷಿಪ್ತ ವಿವರಗಳನ್ನು ಈ ಕಿಖ ಕೋಡ್‍ಅನ್ನು ಗೂಗಲ್‍ನಲ್ಲಿ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ. ಸಂಪರ್ಕ ವಿವರ: ನಿಗಮದ ಸಹಾಯವಾಣಿ: 94484 51111 (ಬೆಳಿಗ್ಗೆ:10 ರಿಂದ ಸಂಜೆ:5.30 ವರೆಗೆ ಸಂಪರ್ಕಿಸಬಹುದಾಗಿದೆ). ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ದೂರವಾಣಿ: 08272-221656 ಮೂಲಕ ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕರಾದ ಮಹದೇವಿ ತಿಳಿಸಿದ್ದಾರೆ.