ಮಡಿಕೇರಿ ಆ.24 : ಸ್ವಾಮಿ ವಿವೇಕಾನಂದ ಯೌತ್ ಮೊಮೆಂಟ್ ಕೊಡಗು ಶಾಖೆ, ಮಡಿಕೇರಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಕುಟ್ಟ ಸಮುದಾಯ ಆರೋಗ್ಯ ಕೇಂದ್ರ , ಜನಸ್ನೇಹಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಕುಟ್ಟ ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ
ನಡೆಯಿತು.
ಕಾರ್ಯಕ್ರಮವನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಅಪಘಾತ ಸಂದರ್ಭದಲ್ಲಿ ರಕ್ತ ಅವಶ್ಯಕತೆ ಹೆಚ್ಚಿದ್ದು, ಅಗತ್ಯವಿರುವ ರಕ್ತವನ್ನು ರಕ್ತ ನಿಧಿ ಕೇಂದ್ರದಲ್ಲಿ ಸಂಗ್ರಹ ಮಾಡಲು ಇಂತಹ ಶಿಬಿರವನ್ನು ಏರ್ಪಡಿಸುವುದು ಸಂತಸದ ವಿಷಯ ಎಂದರು.
ರಕ್ತ ನಿಧಿ ಕೇಂದ್ರದ ಡಾ. ಕರುಂಬಯ್ಯ ಮಾತನಾಡಿ, ಒಬ್ಬರು ರಕ್ತದಾನ ಮಾಡಿದರೆ ಅದರಿಂದ ಮೂರು ಜನರಿಗೆ ಪ್ರಯೋಜನವಾಗಲಿದೆ. ಪುರುಷರು 3 ತಿಂಗಳಿಗೊಮ್ಮೆ ಒಂದು ಬಾರಿ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಯುವಕ ಯುವತಿಯರು ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು.
ರಕ್ತದಾನ ಶಿಬಿರದಲ್ಲಿ 50 ರಕ್ತದಾನಿಗಳು ಪಾಲ್ಗೊಂಡು 47 ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕುಟ್ಟ ವೈದ್ಯಾಧಿಕಾರಿ ಡಾ. ಸತೀಶ್, ಕಾನೂರು ವೈದ್ಯಾಧಿಕಾರಿ ಡಾ.ಆಯನ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಾ, ಉಪಾಧ್ಯಕ್ಷರಾದ ತೀರ್ಥ, ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬು ಹಾಗೂ ಸದಸ್ಯರುಗಳು , ವಿವೇಕಾನಂದ ಯುತ್ ಮೊಮೆಂಟ್ ನ ಪೊನ್ನoಪೇಟೆ ಕಾರ್ಯವ್ಯಾಪ್ತಿಯ ಸಿಬ್ಬಂದಿಗಳು ಮತ್ತಿತರು ಪ್ರಮುಖ ಮುಖಂಡರು ಹಾಜರಿದ್ದರು.