ಮಡಿಕೇರಿ ಆ.24 : ಕಥೆ ಸರಳ ಭಾಷೆಯಲ್ಲಿ ಇರಬೇಕು ಆಗ ಅದು ಎಲ್ಲರ ಮನಸ್ಸನ್ನು ತಲುಪುತ್ತದೆ. ಕಥೆಯೊಳಗೆ ಒಂದಾಗಿ ಬೆರೆತು ಕಥೆಯ ಪಾತ್ರಧಾರಿ ನಾನೇ ಎಂಬ ಭಾವನೆಯೊಂದಿಗೆ ಕತೆ ಬರೆದಾಗ ಅದು ಅತ್ಯುತ್ತಮ ಕಥೆಯಾಗುತ್ತದೆ ಎಂದು ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಂದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದ ಅವರು, ಕಥೆಗಳ ರಚನೆ ಮಾಡುವ ಸಂದರ್ಭ ಅದು ಉತ್ಪ್ರೇಕ್ಷ ರಹಿತವಾಗಿರಬೇಕು, ಕಥೆಯ ವೇಗ ಆರಂಭದಿಂದ ಕೊನೆಯವರೆಗೂ ಒಂದೇ ರೀತಿ ಇರಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯ ಅಧಿಖಾರಿ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಕಥೆ ಕಾದಂಬರಿ ಇವುಗಳಿಂದ ದೂರ ಹೋಗಿ ಮೊಬೈಲ್ ಮೊರೆಹೋಗಿರುವ ಈ ಕಾಲದಲ್ಲಿ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಕಥೆ ಬರೆಯುವ ಸ್ಪರ್ಧೆಯನ್ನು ಸಾಹಿತ್ಯ ಪರಿಷತ್ ನಡೆಸುತ್ತಿದೆ ಸಾಹಿತ್ಯ ಪರಿಷತ್ತು ನಡೆಸುವ ಎಲ್ಲ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.
ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಸಂಸ್ಕೃತಿಯ ಅರಿವು ಮೂಡಿಸುವ ಸಲುವಾಗಿ ಸಾಹಿತ್ಯ ಪರಿಷತ್ತು ಎಲ್ಲ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸುತ್ತಿದೆ ಇದರ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಾಹಿತಿಗಳಾಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ಪಿ.ಕೆ.ನಳಿನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಥೆ ಬರೆಯುವ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದತ್ತಿ ಸ್ಥಾಪಿಸಲಾಗಿದ್ದು ಅವುಗಳಲ್ಲಿ ಹೆಚ್ಚಿನ ದತ್ತಿಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ, ಬರೆಯುವ ಆಸಕ್ತಿ, ಸಂಸ್ಕೃತಿಗೆ ಅರಿವು, ಭಾಷಾ ಬಾಂಧವ್ಯ ಇವುಗಳಿಗೆ ಸಂಬಂಧಪಟ್ಟಂತೆ ಇದ್ದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮೂಡುವಂತೆ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ನುಡಿದರು.
ಜಿಲ್ಲೆಯ ವಿವಿಧ ಶಾಲೆಗಳಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲೆಯ ಪ್ರಭಾರ ಉಪಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ಎಸ್. ಐ ಮುನಿರ್ ಅಹಮದ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಮಡಿಕೇರಿ ತಾಲೂಕು ಮಾಜಿ ಗೌರವ ಕಾರ್ಯದರ್ಶಿ ಕೆ.ಯು ರಂಜಿತ್ ವಂದಿಸಿದರು.