ಮಡಿಕೇರಿ ಆ.28 : ಇದೇ ಆ.30 ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ‘ಗೃಹಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಈ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಅಗತ್ಯ ಸಿದ್ಧತೆ ಸಂಬಂಧ ಮಾಹಿತಿ ಪಡೆದು ಸಚಿವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಯಜಮಾನಿ ಮಹಿಳೆಗೆ 2 ಸಾವಿರ ರೂ. ವನ್ನು ನೇರ ನಗದು ಮೂಲಕ ತಲುಪಿಸುವ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಇದೊಂದು ರಾಜ್ಯ ಮಟ್ಟದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಈ ಐದು ಜಿಲ್ಲೆಯ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ ‘ಗೃಹಲಕ್ಷ್ಮಿ’ ಪ್ರತಿ ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ‘ಯೋಜನೆ ಜಾರಿಯು ಇದೇ ಆಗಸ್ಟ್, 30 ರಂದು ಮೈಸೂರಿನಲ್ಲಿ ಚಾಲನೆಗೊಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ 103 ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಿಂದ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆದುಕೊಂಡುಹೋಗುವುದು ಮತ್ತು ಬರುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸೂಚಿಸಿದರು.
ನೋಡಲ್ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ‘ಗೃಹಲಕ್ಷ್ಮಿ ಯೋಜನೆ’ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆ.30 ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಇರಬೇಕು. ಆ ನಿಟ್ಟಿನಲ್ಲಿ ಪ್ರತೀ ಗ್ರಾ.ಪಂ.ನಿಂದ ಆಗಮಿಸುವ ಫಲಾನುಭವಿಗಳ ಪಟ್ಟಿಯನ್ನು ಖಾತರಿಪಡಿಸಿಕೊಳ್ಳುವಂತೆ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದರು.
ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪ್ರತೀ ಗ್ರಾ.ಪಂ.ಹಂತದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪಿಡಿಒಗಳು, ತಾ.ಪಂ.ಇಒಗಳು, ತಹಶೀಲ್ದಾರರು, ಸಿಡಿಪಿಒ ಹೀಗೆ ಎಲ್ಲಾ ಹಂತದ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನಾ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಕೈಜೋಡಿಸುವಂತೆ ಸಚಿವರು ಹೇಳಿದರು.
ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಕಲ್ಪಿಸುವಂತೆ ಸಚಿವರು ನಿರ್ದೇಶನ ನೀಡಿದರು.
ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಬೇಕು. ಪ್ರತೀ ಬಸ್‍ನಲ್ಲಿ 50 ಮಂದಿಯ ವಾಟ್ಸ್‍ಅಪ್ ಗ್ರೂಪ್‍ನ್ನು ಮಾಡಿಕೊಂಡು ಸಮನ್ವಯತೆ ಸಾಧಿಸಿ ಸುರಕ್ಷಿತವಾಗಿ ವಾಪಸ್ಸು ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
‘ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ‘ಗೃಹಲಕ್ಷ್ಮಿ’ ಯೋಜನೆಯು ಸರ್ಕಾರದ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸರ್ಕಾರದ ಯೋಜನೆ ಪ್ರತೀ ಬಡವರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಬಡವರವನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಗ್ರಾ.ಪಂ.ಜೊತೆಗೆ ಮಡಿಕೇರಿ ನಗರ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣಗಳಿಂದಲೂ ಬಸ್ ವ್ಯವಸ್ಥೆ ಮಾಡುವಂತೆ ಶಾಸಕರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ನೋಡಲ್ ಅಧಿಕಾರಿಗಳಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಆಯಾಯ ಗ್ರಾ.ಪಂ. ಕಾರ್ಯಾಲಯದಿಂದ ಹೊರಡಲಿದೆ. ಪ್ರತೀ ಬಸ್‍ಗೆ ಕನಿಷ್ಠ 50 ರಂತೆ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಜಿಲ್ಲೆಯಿಂದ 5,150 ಮಂದಿ ಫಲಾನುಭವಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 1,31,863 ಗುರಿಯಲ್ಲಿ 1,05,122 ಮಂದಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದು, ಶೇ.81.14 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಮಡಿಕೇರಿ ತಾಲ್ಲೂಕಿನಿಂದ 1,300 ಮಂದಿ, ಸೋಮವಾರಪೇಟೆ ತಾಲ್ಲೂಕಿನಿಂದ 1,150, ಕುಶಾಲನಗರ ತಾಲ್ಲೂಕಿನಿಂದ 800, ಪೊನ್ನಂಪೇಟೆ ತಾಲ್ಲೂಕಿನಿಂದ 1,050, ವಿರಾಜಪೇಟೆ ತಾಲ್ಲೂಕಿನಿಂದ 850 ಒಟ್ಟು 5,150 ಮಂದಿ ಗೃಹಲಕ್ಷ್ಮಿ ಯೋಜನಾ ಫಲಾನುಭವಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ನಿಯೋಜಿಸಲ್ಪಟ್ಟ ಫಲಾನುಭವಿಗಳಿಗೆ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ, ಕಾಫಿ, ಬಿಸ್ಕೇಟ್, ವಾಟರ್ ಬಾಟಲ್‍ನ್ನು ನೋಡಲ್ ಅಧಿಕಾರಿಗಳು ಒದಗಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೆಎಸ್‍ಆರ್‍ಟಿಸಿ ಪುತ್ತೂರು ಘಟಕದ ಜಯಕರಶೆಟ್ಟಿ ಅವರು ಮಾಹಿತಿ ನೀಡಿ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದಲ್ಲಿ 60 ಬಸ್‍ಗಳಿದ್ದು, ಜೊತೆಗೆ ಪುತ್ತೂರು ಮತ್ತಿತರ ಡಿಪೋಗಳಿಂದ 40 ಕ್ಕೂ ಹೆಚ್ಚು ಬಸ್‍ಗಳು ಒಟ್ಟು 103 ಗ್ರಾ.ಪಂ.ಗಳಿಗೆ ಬಸ್‍ನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತೀ ಗ್ರಾ.ಪಂ.ನಿಂದ 50 ಮಂದಿ ಫಲಾನುಭವಿಗಳನ್ನು ಕಳುಹಿಸಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗೃಹಲಕ್ಷ್ಮಿ ಯೋಜನೆ ಸಂಬಂಧ ಹಲವು ಮಾಹಿತಿ ನೀಡಿದರು.