ಮಡಿಕೇರಿ ಆ.28 : ಆಟೋ ಚಾಲಕರ ಹಾದಿ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿರುವ ಬೆರಳೆಣಿಕೆಯಷ್ಟು ಮಂದಿ ಆಟೋ ಮಾಲೀಕ, ಚಾಲಕರ ಸಂಘಕ್ಕೆ ಕಾನೂನಿನ ಪಾಠ ಮಾಡುವ ಅಗತ್ಯವಿಲ್ಲವೆಂದು ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್.ಮೇದಪ್ಪ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಘದ ಸದಸ್ಯತ್ವ ಹೊಂದಬೇಕು ಎನ್ನುವ ಅರಿವು ಎಲ್ಲಾ ಚಾಲಕರಿಗಿದೆ. ಆದರೆ ಕೆಲವು ಚಾಲಕರು ಗುಂಪುಗಾರಿಕೆ ಮಾಡಿಕೊಂಡು ಸಂಘವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು ಒಂದು ಸಾವಿರ ಆಟೋ ಚಾಲಕರ ಪೈಕಿ ಬೆರಳೆಣಿಕೆಯ ಆಟೋ ಚಾಲಕರು ಸಂಘದ ಜನಪರ ಕಾಳಜಿಯನ್ನು ವಿರೋಧಿಸುತ್ತಿದ್ದಾರೆ. ಚಾಲಕರ ಹಾಗೂ ಸಾರ್ವಜನಿಕರ ಹಿತ ಕಾಯಲು ಸಂಘ ತೆಗೆದುಕೊಂಡ ನಿರ್ಧಾರಗಳನ್ನು ಸಹಿಸಲಾಗದೆ ವಿನಾಕಾರಣ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಂಘ ಇಲಾಖೆಗಳ ಸಹಕಾರದೊಂದಿಗೆ ಕೆಲವು ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೈಗೊಂಡಿದೆ.
ಅತ್ಯAತ ದಕ್ಷತೆಯಿಂದ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ಚಾಲಕರಿಗೆ ಇದುವೇ ವೃತ್ತಿಯಾಗಿದೆ. ವೃತ್ತಿ ಜೀವನಕ್ಕೆ ದ್ರೋಹ ಬಗೆದು ರಾಜಕೀಯ ಅಥವಾ ಗುಂಪುಗಾರಿಕೆ ಮಾಡುವ ಅಗತ್ಯ ಸಂಘದ ಸದಸ್ಯರಿಗಿಲ್ಲ. ಗುಂಪುಗಾರಿಕೆಯ ಮೂಲಕ ಚಾಲಕರಲ್ಲಿ ಒಡಕು ಮೂಡಿಸಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಿರುವ ಕೆಲವು ಆಟೋ ಚಾಲಕರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಮೇದಪ್ಪ ಒತ್ತಾಯಿಸಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಸಂಘದ ಉದ್ದೇಶವಾಗಿದ್ದು, ದಕ್ಷತೆಯಿಂದ ಜನಸ್ನೇಹಿಯಾಗಿ ಆಟೋ ಚಾಲಿಸುತ್ತಿರುವ ಚಾಲಕರುಗಳಿಗೆ ಕೆಟ್ಟ ಹೆಸರು ಬಂದಲ್ಲಿ ಅದಕ್ಕೆ ಜಾಗೃತ ಆಟೋ ಚಾಲಕರ ಬಳಗದ ರುವಾರಿಗಳು ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.








