ಮಡಿಕೇರಿ ಆ.30 : ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ವತಿಯಿಂದ ಶ್ರೀ ನಾರಾಯಣ ಗುರುಗಳ 169ನೇ ಮತ್ತು ಮಹಾತ್ಮ ಅಯ್ಯನ್ ಕಾಳಿ ಅವರ 160ನೇ ಜಯಂತಿಯನ್ನು ಆಚರಿಸಲಾಯಿತು.
ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರು ಸಮಾಜದಲ್ಲಿ ಅಸ್ಪೃಶ್ಯರಂತೆ ಕಾಣುತ್ತಿದ್ದ ಸಮುದಾಯವನ್ನು ಗುರುತಿಸುವಂತೆ ಮಾಡಿದ ಮಹಾಪುರುಷರು. ಇಂತಹ ಮಹಾತ್ಮರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ದಸಂಸ ಭೀಮಾವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರು ಜನರಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾದಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಇಂತಹ ನಾಯಕರಿಂದ ಇದೀಗ ಸಮಾಜತೆ, ಏಕತೆ ಹಾಗೂ ಸಹೋದರತ್ವ ಕಾಣುತ್ತಿದೆ ಎಂದರು.
ಕೊಡಗು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಕೆ.ಎನ್.ಅಶೋಕ ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರು, ಶೋಷಿತರ ಮೇಲೆ ನಡೆಯುತ್ತಿದ್ದ ಶೋಷಣೆಯ ಸುಧಾರಣೆಗಾಗಿ ಸಹಸ್ರಾರು ಜನರಿಗೆ ತಿಳುವಳಿಕೆ ನೀಡುವ ಮೂಲಕ ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಚಾರವಾದಿ ವೆಂಕಟ್ ನಾಯಕ್ , ಕುಶಾಲನಗರದ ಡಾ.ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷ ಎಸ್.ಜೆ.ಸತೀಶ್, ಬಿ.ಎಸ್.ಪಿ ಜಿಲ್ಲಾ ಉಪಾಧ್ಯಕ್ಷ ಜಯಪ್ಪ ಹಾನಗಲ್, ಆರ್‌ಪಿಐ ಕೆ ಜಿಲ್ಲಾಧ್ಯಕ್ಷ ಎಸ್.ಕೆ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಟಿ.ಸುರೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಸ್.ಜೆ.ರಾಜ್, ದಸಂಸ ಭೀಮಾವಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ವಾಮಿ ಹಾಜರಿದ್ದರು. ಪ್ರಮುಖರಾದ ವೆಂಕಟೇಶ್ ನಾಯಕ್ ವಂದಿಸಿದರು.










