ನಾಪೋಕ್ಲು ಆ.31 : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಅನುದಾನದ ಹಾಗೂ ಸ್ವಂತ ದುಡ್ಡಿನಲ್ಲಿ ವಿಶಾಲವಾದ ಪೌಳಿ, ಬೋಧನಾ ಇತರ ಕಟ್ಟಡ ನಿರ್ಮಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಪೌಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರಾಧ್ಯ ದೈವ ಇಗ್ಗುತ್ತಪ್ಪ ದೇವಾಲಯದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯು ಈ ಹಿಂದೆ ನಿರ್ಮಿಸಿದ ಕಟ್ಟಡವನ್ನು ಸರ್ಕಾರದ ವತಿಯಿಂದ ದುರಸ್ತಿ ಮಾಡಲಾಗುವುದು ಈ ಬಗ್ಗೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ದೇವಾಲಯಕ್ಕೆ ಅತ್ಯಗತ್ಯವಾದ ಊಟದ ಸಭಾಂಗಣವನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದರು.
ಈ ಸಂದರ್ಭ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಮಳೆ ಕೊರತನಿಗಿ ರೈತರು ಬೆಳೆಸಿದ ಬೆಳೆ ಸಮೃದ್ಧಿಯಾಗಿ ನಾಡು ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸಿಕೊಂಡರು.
ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಮಾತನಾಡಿ, ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ಭಕ್ತರ ಒಳಿತಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ದೇವರು ಒಳ್ಳೆಯದನ್ನು ಅನುಗ್ರಹಿಸಲಿ ಈ ಕಾರ್ಯದಲ್ಲಿ ಮಾಜಿ ಸಂಸದ ಸಿ.ಎಸ್ ಪುಟ್ಟರಾಜು ಅವರ ಸಹಕಾರ ವಿದೆ ಎಂದರು.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಭಕ್ತರ ಒಳಿತಿಗಾಗಿ ಅಭಿವೃದ್ಧಿಗೆ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. 85 ಲಕ್ಷ ರೂ ವೆಚ್ಚದಲ್ಲಿ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಸ್ವಂತ ಖರ್ಚಿನಲ್ಲಿ ಪೌಳಿಯನ್ನು ಹಾಗೂ ಸಂಸದರ ನಿಧಿಯಿಂದ 20 ಲಕ್ಷ ರೂ.ವೆಚ್ಚದಲ್ಲಿ ಬೋಜನಾಲಯ ನಿರ್ಮಿಸಲಾಗಿದೆ ಎಂದರು.
ಪೌಳಿ ಉದ್ಘಾಟನೆಯ ಅಂಗವಾಗಿ ಆಶ್ಲೇಷ ಬಲಿ, ವಾಸ್ತು ಹೋಮ, ಸುದರ್ಶನ ಹೋಮ, ವಾಸ್ತು ಬಲಿ ನಡೆಯಿತು.
ಬುಧವಾರ ಬೆಳಿಗ್ಗೆ ಲಕ್ಷ್ಮಿ ಗಣಪತಿ ಹೋಮ, ರುದ್ರಾಭಿಷೇಕ, ಶತಾರುದ್ರಾಭಿಷೇಕ, ರುದ್ರ ಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆಯಿತು. ಪೌಳಿ ಉದ್ಘಾಟನೆಯ ಬಳಿಕ ತುಲಾಭಾರ ಸೇವೆ, ಮಹಾಮಂಗಳಾರತಿ, ದೇವರ ನೃತ್ಯ ಬಲಿ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.
ಈ ಸಂದರ್ಭ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪ ಅಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳದಂಡ ಲಲಿತಾ ನಂದಕುಮಾರ್, ಅಖಿಲ ಕೊಡವ ಸಮಾಜದ ಅಧ್ಯಕ್ಷ ಹಾಗೂ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ, ನಿರ್ದೇಶಕರುಗಳಾದ ಕಲಿಯಂಡ ಹ್ಯಾರಿ ಮಂದಣ್ಣ, ಡಾ.ಸಣ್ಣುವಂಡ ಕಾವೇರಪ್ಪ, ಪಾಂಡಂಡ ನರೇಶ್, ಭಕ್ತ ಜನಸಂಘದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬಾಚಮಂಡ ಪೂವಣ್ಣ, ಲವ ಚಿಣ್ಣಪ್ಪ, ಖಜಾಂಜಿ ನಂಬಡಮಂಡ ಸುಬ್ರಮಣಿ, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ, ನಾಡಿನ ತಕ್ಕ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ಹಾಜರಿದ್ದರು.
ದೇವಾಲಯದ ಮುಖ್ಯ ಅರ್ಚಕ ಕುಶ ಭಟ್ ಹಾಗೂ ಜಗದೀಶ್, ಶ್ರೀಕಾಂತ್ ದೇವಾಲಯದಲ್ಲಿ ತುಲಾಭಾರ ಸೇವೆ,ವಿಶೇಷ ಮಹಾ ಪೂಜೆ,ದೇವರ ನೃತ್ಯ ಬಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಹೋಮ ಹವನಗಳನ್ನು ರಾಘವೇಂದ್ರ ಉಪಾಧ್ಯಾಯ ಮತ್ತು ತಂಡದವರು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ