ಸಿದ್ದಾಪುರ ಆ.31 : ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಎಲ್ಲಾ ಹಬ್ಬಗಳ ಆಚರಣೆಯು ನಡೆಯುತ್ತಿದ್ದು,
ಎಲ್ಲರನ್ನೂ ಒಗ್ಗೂಡಿಸಿ ಆಚರಿಸುವ ಹಬ್ಬಗಳ ಮೂಲಕ ಬಾಂಧವ್ಯ ಬೆಸಿಗೆಯೊಂದಿಗೆ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಹೇಳಿದರು.
ನೆಲ್ಯಹುದಿಕೇರಿಯ ಕೊಫಿಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಆರನೇ ವರ್ಷದ ಸೌಹಾರ್ದ ಓಣಂ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇರಳದಲ್ಲಿ ಹೆಸರುವಾಸಿಯಾಗಿರುವ ಓಣಂ ಸಂಭ್ರಮ ಕೊಡಗು ಜಿಲ್ಲೆಯಲ್ಲಿಯೂ ಬಾಂಧವರು ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ.
ಜಾತಿ ಮತ ಭೇದವಿಲ್ಲದೆ ಕೊಫಿಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕಳೆದ ಆರು ವರ್ಷಗಳಿಂದ ಎಲ್ಲಾ ಬಂದವರನ್ನು ಒಗ್ಗೂಡಿ ಓಣಂ ಹಬ್ಬ ಆಚರಣೆಯ ಮೂಲಕ ಸೌಹಾರ್ದತೆ ಮೂಡಿಸುತ್ತಿರುವ ಕೊಫಿಯ ಹೋಟೆಲ್ ಮಾಲೀಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಓಣಂ ಹಬ್ಬ ಆಚರಣೆಯ ಅಂಗವಾಗಿ ಮ್ಯೂಸಿಕ್ ಗ್ಯಾಲರಿಯ ತಂಡದವರ ಗಾನ ಮೇಳದೊಂದಿಗೆ
ಮಹಿಳೆಯರು, ಪುಟಾಣಿಗಳು ನೃತ್ಯದ ಮೂಲಕ ಸಂಭ್ರಮಿಸಿದರು.
ಬಗೆ ಬಗೆಯ ಆಹಾರ ಪದಾರ್ಥಗಳ ಓಣಂ ಸದ್ಯ ಹಬ್ಬದೂಟದಲ್ಲಿ ಪಾಲ್ಗೊಂಡು ಸವಿದರು.
ಈ ಸಂದರ್ಭ ನೆಲ್ಯಹುದಿಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಕೆ.ಹಕೀಂ, ಕಾಫಿ ಬೆಳಗಾರ ಶ್ಯಾಮ್ ಅಯ್ಯಪ್ಪ, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಗ್ರಾ.ಪಂ ಸದಸ್ಯ ಅಪ್ಸಲ್, ಪ್ರಮುಖರಾದ ಕಿಶೋರ್ , ಶಾಜಿ, ಕೊಪಿಯ ಮಾಲಿಕ ಶೀಯಾಬ್, ಸಲೀಂ ಸೇರಿದಂತೆ ಮತ್ತಿತರರು ಇದ್ದರು.









