ಮಡಿಕೇರಿ ಸೆ.2 : ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೇಕೇರಿ ಗ್ರಾಮದಲ್ಲಿ ಸ್ವಚ್ಚತಾ ಶ್ರಮದಾನ ನಡೆಯಿತು.
ಸ್ವಚ್ಚತಾ ಕಾರ್ಯದಲ್ಲಿ ಪುರುಷರು ಮಹಿಳೆಯರಾದಿಯಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಪಾಲ್ಗೊಂಡು ಸ್ವಚ್ಚ ಗ್ರಾಮ ಸಂಕಲ್ಪ ಕೈಗೊಂಡರು.
ಸುಭಾಶ್ ನಗರ ಜಂಕ್ಷನ್, ಶಕ್ತಿನಗರ ಜಂಕ್ಷನ್, ಬಿಳಿಗೇರಿ ಜಂಕ್ಷನ್ ಹಾಗೂ ಕಾವೇರಿ ಬಡಾವಣೆಯಿಂದ ಮೇಕೇರಿ ಶಾಲೆವರೆಗೆ ಸ್ವಚ್ಚತಾ ಕಾರ್ಯ ನಡೆಯಿತು.
ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಇದೇ ಸಂದರ್ಭ ರಸ್ತೆಯ 2 ಬದಿಯ ಕುರುಚಲು ಕಾಡು ಗಿಡಗಳನ್ನು ಕಡಿದು ತೆರವುಗೊಳಿಸಲಾಯಿತು.
ಗ್ರಾಮದ ನಾಲ್ಕೂ ದಿಕ್ಕಿನಿಂದ ಸ್ವಚ್ಫತಾ ಕಾರ್ಯದೊಂದಿಗೆ ಶಾಲಾ ಮೈದಾನಕ್ಕೆ ಆಗಮಿಸಿದ ಗ್ರಾಮಸ್ಥರು ಶಾಲಾ ಮೈದಾನ ಹಾಗೂ ಅಂಗನವಾಡಿ ಸುತ್ತಲೂ ಬೆಳೆದು ನಿಂತಿದ್ದ ಕಾಡು ಕಸವನ್ನು ತೆರವುಗೊಳಿಸಿ ಮೈದಾನವನ್ನು ಶುಚಿಗೊಳಿಸಿದರು.
ಈ ಸಂದರ್ಭ ಮಾತನಾಡಿದ ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್. ಉಮೇಶ್, ಮೇಕೇರಿ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಮಾಡಿ, ಆ ಮೂಲಕ ಉಳಿದ ಗ್ರಾಮಗಳಿಗೆ ಪ್ರೇರಣೆ ಹಾಗೂ ಮಾದರಿಯಾಗಿಸಬೇಕೆಂಬ ಸದುದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.