ಮೂರ್ನಾಡು ಸೆ.2 : ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾಲಿಬಾಲ್ ತಂಡದ ವಿದ್ಯಾರ್ಥಿನಿಯರು ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಮಡಿಕೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ವತಿಯಿಂದ ಆಯೋಜಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲೆಯ 14 ವರ್ಷದ ಕೆಳಗಿನ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ.ಲಲಿತ, ದೈಹಿಕ ಶಿಕ್ಷಕಿ ಪ್ರೇಮಲತ ಶೆಡ್ತಿ ಮತ್ತು ಶಾಲಾ ಹಿರಿಯ ಶಿಕ್ಷಕಿ ಬಿ.ಎನ್. ಪುಷ್ಪಾವತಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ವಿಜೇತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಪ್ರಥಮ, ಬಾಲಕರು ಮತ್ತು ಬಾಲಕಿಯರ ಖೊಖೊ ಪಂದ್ಯಾವಳಿಯಲ್ಲಿ ಪ್ರಥಮ, ಮೇಲಾಟದಲ್ಲಿ ಬಾಲಕಿಯರ ರಿಲೆ ಪ್ರಥಮ, ಬಾಲಕಿಯರ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ಓಟದಲ್ಲಿ ದ್ವಿತೀಯ, ಬಾಲಕರ 200 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ಬಾಲಕಿಯರ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದು ಚಪ್ಪಂಡಡಿ ಸರ್ಕಾರಿ ಪ್ರಾಥಮಿಕ ಶಾಲೆಯು ನಾಪೋಕ್ಲುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕಿ ಪ್ರೇಮಲತ ಶೆಡ್ತಿ ತಿಳಿಸಿದ್ದಾರೆ.