ಕೊಡ್ಲಿಪೇಟೆ ಸೆ.14 : ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರ ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷ ಹನೀಫ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೋಮವಾರಪೇಟೆ ತಾಲೂಕು ವತಿಯಿಂದ ದೊಡ್ಡಕುಂದ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಸಿರಿಧಾನ್ಯಗಳು, ತರಕಾರಿಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಮ್ಮ ಹಿರಿಯರು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು. ಹಳ್ಳಿಗಳಲ್ಲಿ ಅಕ್ಕಿಯನ್ನು ನೋಡುತ್ತಿದ್ದುದೇ ಅಪರೂಪವಾಗಿತ್ತು. ಆದರೆ ಈಗ ಅಕ್ಕಿ, ಸಕ್ಕರೆ ಮೊದಲಾದ ಪದಾರ್ಥಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದರು.
ಮಕ್ಕಳು ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಮಕ್ಕಳು ಪೌಷ್ಟಿಕಾಂಶ ಆಹಾರಗಳನ್ನು ಸೇವಿಸಬೇಕು. ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕಿ ದುಂಬಿತಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳಲ್ಲಿ ತೂಕ ಕಡಿಮೆ ಮತ್ತು ರಕ್ತಹೀನತೆಯ ಹರಡುವಿಕೆಯನ್ನು ಕಡಿಮೆ ಮಾಡಲು ಹಾಗೂ ಜಾಗೃತಿ ಮೂಡಿಸಲು ಮಹತ್ವಾಕಾಂಕ್ಷೆಯ ಪೋಷಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗನವಾಡಿ ಮೂಲಕ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರದ ಪೂರೈಕೆಯೊಂದಿಗೆ ಆರೋಗ್ಯ ಪರಿಸ್ಥಿತಿಗಳಲ್ಲಿ ಸ್ಥಿರವಾದ ಸುಧಾರಣೆಯಾಗಿದೆ ತರಲಾಗುತ್ತಿದೆ ಎಂದರು.
ಈ ಸಂದರ್ಭ ಬ್ಯಾಡಗೊಟ್ಟ ಗ್ರಾ.ಪಂ ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿ ರಕ್ಷಿತ್, ವಿವಿಧ ಅಂಗನವಾಡಿ ಕೇಂದ್ರದ ಕಾರ್ಯಕರ್ತೆರಾದ ವನಜಾಕ್ಷಿ, ಚಿನ್ನಮ್ಮ, ಡಿ.ಕೆ.ನಿರ್ಮಲಾ, ವನಿತಾ, ವಿಮಲಾ, ಶೋಭಾ, ಚಂದ್ರಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಬ್ಯಾಡಗೊಟ್ಟ, ಶಿರಹ, ಬೆಂಬಳೂರು, ಖ್ಯಾತೆ, ಊರುಗುತ್ತಿ, ಶಿವರಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಂದರ್ಭ ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ಕಾರ್ಯಕ್ರಮ ಹಾಗೂ ಆರು ತಿಂಗಳು ತುಂಬಿದ ಮಗುವಿಗೆ ಅನ್ನಪ್ರಸಾನ ಕಾರ್ಯಕ್ರಮ ನಡೆಸಲಾಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.








