ಸುಂಟಿಕೊಪ್ಪ ಸೆ.14 : ಹನ್ನೆರಡನೇ ಶತಮಾನದಲ್ಲಿ ಜನರು ಅನುಭವಿಸುತ್ತಿದ್ದ ಸಾಮಾಜಿಕ ಅಸಮಾನತೆಗಳನ್ನು ನೀಗಿಸಲು ಎಲ್ಲಾ ಜಾತಿ ವರ್ಗಗಳ ವಚನಕಾರರು ವಚನಗಳನ್ನು ರಚಿಸಿ ಜನರಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅವರ ಜೀವನ ಸುಧಾರಣೆಗೆ ರೂಪಿಸಿದ ಜನರಾಡುವ ಸರಳ ಭಾಷೆಯ ವಚನಗಳು ಸದ್ಗುಣಗಳನ್ನು ಭಿತ್ತಿ ಬೆಳೆವ ಭೂಮಿಕೆ ಎಂದು ಕುಶಾಲನಗರ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ” ವಿದ್ಯಾರ್ಥಿಗಳೆಡೆಗೆ ವಚನ ಸಾಹಿತ್ಯದ ನಡಿಗೆ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ನಾಡಿನ ಸರ್ವ ಶ್ರೇಷ್ಠ ಸಾಹಿತ್ಯ ಹಾಗೂ ಸಂಸ್ಕ್ರತಿ ಉಳಿಸಬೇಕಾದುದು ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದುದು ಇಂದಿನ ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಚನ ಸಾಹಿತ್ಯ,ದಾಸ ಸಾಹಿತ್ಯ, ಕೀರ್ತನೆ ಮೊದಲಾದ ಭಾರತೀಯ ಸಂಸ್ಕ್ರತಿಯ ಪರ್ವಗಳನ್ನು ಅರಿತು ಸಮಾಜಕ್ಕೆ ಉಣಬಡಿಸುವ ಮೂಲಕ ಸುಗಮ ಸಮಾಜ ಕಟ್ಟಬೇಕಿದೆ. ನಾಲ್ಕು ದಿನಗಳ ಮಾನವ ಬದುಕನ್ನು ಸುಂದರವಾಗಿ ಕಳೆಯಬೇಕಿದ್ದಲ್ಲಿ ಪರಸ್ಪರ ವೈರತ್ವ, ಅಸೂಯೆ, ಕೋಪ ತಾಪಗಳನ್ನು ಬಿಟ್ಟು ಎಲ್ಲರೊಂದಿಗೂ ಎಲ್ಲರ ಜೀವನ ಸ್ನೇಹ ಹಾಗೂ ವಿಶ್ವಾಸಗಳಿಂದ ಕೂಡಿರಬೇಕು ಎಂದು ರಾಜೇಶ್ ಕೋಟ್ಯಾನ್ ಇಂಗಿತ ವ್ಯಕ್ತಪಡಿಸಿದರು.
ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ ಹೆಬ್ವಾಲೆ ಪ್ರೌಢಶಾಲೆಯ ಉಪನ್ಯಾಸಕ ಮೆ.ನಾ.ವೆಂಕಟನಾಯಕ್, 800 ವರ್ಷಗಳ ಹಿಂದೆ ವಚನಕಾರರು ತಮ್ಮ ಆಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ಹಾಗೂ ಸತ್ವಗಳನ್ನು ಸಾರಿ ಜಟಿಲವಾದ ಮನುಷ್ಯನ ಬದುಕನ್ನು ಸರಳಗೊಳಿಸಿ ನೈಜ ಬದುಕಿನ ಗಂಧ ಲೇಪಿಸಿ ತಮ್ಮ ಅನುಭವದ ನುಡಿಗಳ ತಿಂಗಳ ಬೆಳಕನ್ನು ಜನರ ಅಂಗಳಕ್ಕೆ ತಂದ ಶರಣ ಶ್ರೇಷ್ಠರು.
ಹನ್ನೆರಡನೇ ಶತಮಾನದ ಬಸವಯುಗದ ವಚನ ಸಾಹಿತ್ಯ ಅಂದಿನ ಜನರ ಆಚಾರ – ವಿಚಾರ, ಭಾಷೆ – ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ ಮೇರು ಸಾಹಿತ್ಯವಾಗಿದೆ. ಬಸವಣ್ಣ, ದಾಸಿಮಯ್ಯ, ಚನ್ನಬಸವಣ್ಣ, ಪ್ರಭುದೇವರು, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವ ಮೊದಲಾದವರು ಸಮಾಜ ಸುಧಾರಣೆಯಲ್ಲಿ ಮುಖ್ಯ ಪಾತ್ರವಹಿಸಿದ್ದವರು.
ವೇದವೆಂಬುದು ಓದಿನ ಮಾತು, ರಾಷ್ಟ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ಎಂಬ ಉದ್ವೇಷಣೆಯ ಮೂಲಕ ವೇದ, ಪುರಾಣ ಶಾಸ್ತ್ರಗಳನ್ನು ತಿರಸ್ಕರಿಸಿ ಅನುಭವಕ್ಕೆ ಹೆಚ್ವಿನ ಮಹತ್ವ ಕೊಟ್ಟರು. ಕಾಯಕವೇ ಕೈಲಾಸ ಎಂಬ ಸತ್ಯದ ಮೂಲಕ ವಚನಕಾರರು ದುಡಿಯುವ ಎಲ್ಲಾ ವರ್ಗದವರಿಗೆ, ಕುಶಲ ಕಾರ್ಮಿಕರಿಗೆ ವಿಶೇಷವಾದ ಸ್ಥಾನಮಾನ ಕಲ್ಪಿಸಿದ್ದರು ಎಂದು ವಚನಗಳ ಮೂಲಕ ಅದರ ಸಾರ ಹಾಗೂ ಸತ್ವಗಳನ್ನು ವೆಂಕಟನಾಯಕ್ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಎನ್.ಮಹೇಂದ್ರ ಮಾತನಾಡಿ, ವಚನಕಾರರು ದೇಹವನ್ನೇ ದೇವಾಲಯ ಮಾಡಿಕೊಂಡು ಢಾಂಭಿಕ ಭಕ್ತಿಯನ್ನು ವಿರೋಧಿಸಿದರು.
ಹೊಸಸಮಾಜ ರಚನೆಯ ಮುಕ್ತ ಚರ್ಚೆಗೆ ಅನುಭವ ಮಂಟಪವನ್ನು ಭೂಮಿಕೆ ಮಾಡಿಕೊಂಡ ವಚನಕಾರರು ಪುರೋಹಿತ ಶಾಹಿ, ರಾಜಪ್ರಭುತ್ವ ಮೊದಲಾದ ಪ್ರತಿಗಾಮಿಗಳ ವಿರುದ್ಧ ಚಳುವಳಿ ನಡೆಸಿ ನಾಡು ಕಟ್ಟಿದ ಮಹನೀಯರ ಆದರ್ಶ ಇಂದು ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾದಾಪುರ ಚೆನ್ನಮ್ಮ ಕಾಲೇಜಿನ ನಿವೃತ್ತ ಉಪನ್ಯಾಸಕ ಜಿ.ಇ.ಸೋಮಶೇಖರ್, ಸುಂಟಿಕೊಪ್ಪದ ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಮಾತನಾಡಿದರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಉಪನ್ಯಾಸಕರಾದ ದೇವರಾಜನಾಯಕ್, ಗೀತಾಂಜಲಿ, ಮಹದೇವಸ್ವಾಮಿ, ಕೆ.ಪಿ.ಪಾಪಣ್ಣ ಇದ್ದರು.
ಇದೇ ಸಂದರ್ಭ ಸುಚಿತಾ, ಧನ್ಯಶ್ರೀ, ಹಂಸವಿಗೌಡ, ಶಿವರಾಜ್, ಯಶಸ್ವಿನಿ, ತ್ರವೇಣಿ, ಮೇಘನಾ ಹಾಗೂ ಹೆಚ್.ಟಿ.ಲಕ್ಷ್ಮಿ ಮೊದಲಾದ ವಿದ್ಯಾರ್ಥಿಗಳಿಂದ ವಚನ ಸಾಹಿತ್ಯದ ಕುರಿತು ಭಾಷಣ ಹಾಗೂ ಗಾಯನ ಏರ್ಪಟ್ಟಿತು.
ಕಾಲೇಜಿನ ಕನ್ನಡ ಉಪನ್ಯಾಸಕ ಪಾಪಣ್ಣ ನಿರೂಪಿಸಿದರು. ವಿದ್ಯಾರ್ಥಿನಿ ಜೆ.ಎಸ್. ಬಿಂದು ಸ್ವಾಗತಿಸಿದರು. ಮೇಘನಾ ವಂದಿಸಿದರು.









