ವಿರಾಜಪೇಟೆ ಅ.4 : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಅಂತರೀಕ ಗುಣಮಟ್ಟ ಭರವಸಾ ಕೋಶ ಹಾಗೂ ಸ್ವಾವಲಂಬಿ ಭಾರತ ಅಭಿಯಾನ, ಕೊಡಗು ಜಿಲ್ಲೆ ಆಶ್ರಯದಲ್ಲಿ ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾವಲಂಬಿ ಭಾರತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ರಾಜ್ಯ ಸಂಚಾಲಕ ಪ್ರೊ.ಸತ್ಯನಾರಯಣ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಹೇಗೆ ವಿದೇಶಿಯರ ಆಕ್ರಮಣದ ನಂತರ ಬಡರಾಷ್ಟ್ರವಾಯಿತು, ಸ್ವಾತಂತ್ರ್ಯ ನಂತರ ರಾಷ್ಟ್ರದ ಅಭಿವೃದ್ಧಿಗೆ ಹೇಗೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದರು, 1990ರ ದಶಕದ ನಂತರ ಹೊಸ ಆರ್ಥಿಕ ನೀತಿಯನ್ನು ರೂಪಿಸಿ ಹೇಗೆ ಅಭಿವೃದ್ಧಿಯ ಪಥದಲ್ಲಿ ಸಾಗುತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಳೆದ ಒಂದು ದಶಕದಿಂದ ಭಾರತದ ಬೆಳವಣಿಗೆಯ ದರ ಏರಿಕೆಯಾಗುತ್ತಿರುವುದು ಮತ್ತು ಅದಕ್ಕೆ ಸರ್ಕಾರ ರೂಪಿಸಿದ ಜನಹಿತ ಕಾರ್ಯಕ್ರಮಗಳು ಮತ್ತು ಇಂದು ಭಾರತ ಜಗತ್ತಿನ ಪ್ರಬಲ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ನಿಂತಿರುವುದರ ಬಗ್ಗೆ ಹಾಗೂ ಭಾರತ ಎದುರಿಸುತ್ತಿರುವ ಭೀಕರ ಸಮಸ್ಯೆಗಳಲ್ಲಿ ನಿರುದ್ಯೋಗವು ಒಂದಾಗುದ್ದು, ಅದರ ಭೀಕರತೆಯನ್ನು ಸಹ ವಿವರಿಸಿದರು.
ಸ್ವಾವಲಂಬಿ ಭಾರತ ಅಭಿಯಾನದ ಮೈಸೂರು ವಿಭಾಗದ ಸಂಚಾಲಕ ಸಿದ್ದರಾಜು ಮಾತನಾಡಿ, ಹೇಗೆ ನಾವು ಸ್ವಾವಲಂಬಿಗಳಾಗಬಹುದು ಮತ್ತು ಸ್ವಾವಲಂಬಿಯಾಗಲು ಯುವ ಜನತೆ ಏನು ಮಾಡಬೇಕು ಎಂಬುವುದರ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ, ಭಾರತ ಮುಂದುವರಿದ ರಾಷ್ಟ್ರವಾಗಬೇಕಾದರೆ ಯುವಜನತೆ ಸ್ವಾಭಿಮಾನಿಗಳಾಗಬೇಕು. ಇಂದು ಜನಸಂಖ್ಯೆ ಮಿತಿಮೀರಿ ಜಾಸ್ತಿ ಆಗುತ್ತಿರುವುದರಿಂದ ಸರ್ಕಾರ ಎಲ್ಲರಿಗೂ ಉದ್ಯೋಗ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗಾಗಿ ಯುವ ಜನತೆ ಸ್ವಾವಲಂಬಿಗಳಾಗಲು ಪ್ರಯತ್ನಿಸಿ, ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ.ಬಸವರಾಜು ಮತ್ತು ಅಂತರೀಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ನಾಗರಾಜುಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಅಂತಿಮ ಪದವಿ ತರಗತಿಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಬೋಧಕೇತರು ಹಾಜರಿದ್ದರು.









