ಮಡಿಕೇರಿ ಅ.4 : (ವರದಿ : ಬೊಳ್ಳಜಿರ ಬಿ.ಅಯ್ಯಪ್ಪ) ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸರಕಾರದ ಆದೇಶದಂತೆ ಇತ್ತೀಚೆಗೆ ಕೊಡಗು ವಿಶ್ವವಿದ್ಯಾನಿಯಕ್ಕೆ ಸೇರ್ಪಡೆಗೊಂಡಿದೆ. ಇದಾದ ನಂತರ ಕಾಲೇಜ್ ನಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
2023-24ನೇ ಸಾಲಿನಲ್ಲಿ ಕಾಲೇಜ್ ಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2/3 ರಷ್ಟು ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಲಾಗಿದೆ ಹಾಗೂ ಕೊಡಗು ವಿಶ್ವವಿದ್ಯಾನಿಲಯದಿಂದ ಯಾವುದೇ ಅತಿಥಿ ಉಪನ್ಯಾಸಕರ ನೇಮಕ ಮಾಡಿಲ್ಲ. ಇದರಿಂದ ಕಾಲೇಜ್ ನಲ್ಲಿ ಸುಮಾರು ಶೇ.40ರಷ್ಟು ಅತಿಥಿ ಉಪನ್ಯಾಸಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಚಿತ್ವ, ಭದ್ರತೆ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳನ್ನು ಒಳಗೊಂಡ 31 ಮಂದಿಯ ಮಾನವ ಸಂಪನ್ಮೂಲ ಸೇವೆಯನ್ನು 2023 ಅಕ್ಟೋಬರ್ 1ಕ್ಕೆ ಅಂತ್ಯಗೊಳಿಸಲಾಗಿದೆ. ಅಲ್ಲದೆ 14 ಮಂದಿ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕಾಲೇಜ್ ನ ಆಡಳಿತ ನಿರ್ವಹಣೆಗಾಗಿ (ಕಚೇರಿ, ಶೈಕ್ಷಣಿಕ ಕಾರ್ಯಕ್ರಮ ನಿರ್ವಹಣೆ, ಪ್ರಯೋಗಾಲಯ, ಗ್ರಂಥಾಲಯ, ಉಪಕರಣಗಳ ದುರಸ್ತಿ, ಶುಚಿತ್ವ ಕಾರ್ಯ, ಲೇಕನ ಸಾಮಾಗ್ರಿಗಳು, ಆದಿಲ್ವಾರು, ಅಭಿವೃದ್ಧಿ, ಕ್ರೀಡಾ ಖರ್ಚು, ಪಠ್ಯೇತರ ಖರ್ಚು) ಮಂಗಳೂರು ವಿಶ್ವವಿದ್ಯಾನಿಲಯ ಅಥವಾ ಕೊಡಗು ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಧನ ಸಹಾಯ ಸಿಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಬಿಲ್ಲುಗಳು ಬಾಕಿ ಉಳಿದಿವೆ. ಕಾಲೇಜ್ ನ ಇಂಟರ್ನೆಟ್, ವಿದ್ಯುತ್ ಮತ್ತು ಲ್ಯಾಬ್, ರಾಸಾಯನಿಕಗಳು, ಸೇರಿದಂತೆ ಹಲವು ಸಮಸ್ಯೆಗಳಿವೆ.
75 ವರ್ಷ ಹಳೆಯದಾದ ಕಾಲೇಜಿನ ಮುಖ್ಯ ಶೈಕ್ಷಣಿಕ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕೋರ್ಸುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ತರಗತಿ ಮತ್ತು ಕಚೇರಿ ಕೊಠಡಿಗಳ ಕೊರತೆ ಎದುರಾಗಿದೆ. ಪ್ರಸ್ತುತ ಕಾಲೇಜಿನ ಪಕ್ಕದಲ್ಲಿರುವ ಪುರುಷರ ವಸತಿ ನಿಲಯ ಶಿಥಿಲಗೊಂಡಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ.
1500 ವಿದ್ಯಾರ್ಥಿಗಳಿರುವ ಕಾಲೇಜ್ ನಲ್ಲಿ ಸೂಕ್ತ ಸಭಾಂಗಣ ಇಲ್ಲ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿಯಲ್ಲಿ ಕಂಪ್ಯೂಟರ್‍ಗಳ ಕೊರತೆ ಇದೆ. ಹಳೆಯದಾದ ಬೆಂಚು, ಡೆಸ್ಕ್ ಗಳಿದ್ದು, ಅವುಗಳನ್ನು ಬದಲಿಸಬೇಕಾಗಿದೆ. ಮಡಿಕೇರಿ ನಗರದಿಂದ ಕಾಲೇಜ್ ಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ.
ಎರಡು ವಿಶ್ವವಿದ್ಯಾನಿಲಯಗಳ ನಡುವೆ ಕಾಲೇಜ್ ನ ಮಾನವ ಸಂಪನ್ಮೂಲದ ಹಂಚಿಕೆಯ ಸಮಸ್ಯೆ ಎದುರಾಗಿದೆ. 2006ಕ್ಕೆ ಮೊದಲು ಸೇವೆಗೆ ನೇಮಕವಾದ ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಹಳೆಯ ನಿರ್ದಿಷ್ಟ ಪಿಂಚಣಿ ಯೋಜನೆಯನ್ನು ನೂತನ ವಿಶ್ವವಿದ್ಯಾನಿಲಯದಲ್ಲಿ ಮುಂದುವರೆಸದಂತೆ ರಾಜ್ಯಪತ್ರದಲ್ಲಿ ಉಲ್ಲೇಖಿಸಲಾಗಿದೆ.
2006ರ ನಂತರ ಸೇವೆಗೆ ನೇಮಕವಾದ ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ನೂತನ ಪಿಂಚಣಿ ಯೋಜನೆಯನ್ನು ನೂತನ ವಿಶ್ವವಿದ್ಯಾಲಯದಲ್ಲಿ ಶೇ.14 ರಷ್ಟು ಪಾಲನ್ನು ತನ್ನ ಆತಂರಿಕ ಸಂಪನ್ಮೂಲದಿಂದ ವಿಶ್ವವಿದ್ಯಾನಿಲಯವು ಸಿಬ್ಬಂದಿಗಳ ಎನ್‍ಪಿಎಸ್ ಖಾತೆಗೆ ಸಂದಾಯ ಮಾಡಬೇಕಾಗಿದೆ. ಆದರೆ ನೂತನ ವಿಶ್ವವಿದ್ಯಾನಿಲಯದಲ್ಲಿದ ಆಂತರಿಕ ಸಂಪನ್ಮೂಲದ ಕೊರತೆಯ ಸಮಸ್ಯೆ, ನೂತನ ವಿಶ್ವವಿದ್ಯಾನಿಲಯದಲ್ಲಿ ಉಳಿಯಲು ಇಚ್ಛಿಸುವ ಸಿಬ್ಬಂದಿಗಳಿಗೆ ವೃತ್ತಿ ಪದೋನ್ನತಿಯ ಸಮಸ್ಯೆ, ಅತಿಥಿ ಉಪನ್ಯಾಸಕರ ವೇತನವು ಸಕಾಲಕ್ಕೆ ಬಿಡುಗಡೆಯಾಗದ ಸಮಸ್ಯೆ, ಕೊಡಗು ವಿಶ್ವವಿದ್ಯಾನಿಲಯದಡಿ ಕಾಲೇಜ್ ನಲ್ಲಿರುವ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದ ಕಡಿಮೆ ಅರ್ಜಿ ಸಲ್ಲಿಕೆ ಮತ್ತು ನೀರಸ ಪ್ರತಿಕ್ರಿಯೆ ಇದೆ, ಅಲ್ಲದೆ ಸ್ನಾತಕೋತ್ತರ ವಿಭಾಗಗಳು ಮುಚ್ಚಿಹೋಗುವ ಆತಂಕವಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶ ಮಡಿಕೇರಿಯಲ್ಲಿರುವ ಅತ್ಯಂತ ಹಳೆಯ ಮತ್ತು ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಯಾಗಿದೆ. ಇದನ್ನು 1949ರಲ್ಲಿ ಸರ್ಕಾರಿ ಕಾಲೇಜಾಗಿ ಸ್ಥಾಪಿಸಲಾಯಿತು. ಕಾಲೇಜು 33 ಎಕರೆಗಳ ವಿಶಾಲ ಸುಂದರ ಹಸಿರು ಪರಿಸರದಲ್ಲಿದೆ. ಉನ್ನತ ಶಿಕ್ಷಣದ ಬಾಗಿಲುಗಳನ್ನು ತರೆದಿರುವ ಈ ಕಾಲೇಜು ದೂರದೃಷ್ಟಿಯ ಹಿರಿಯರ ಅವಿರತ ಪರಿಶ್ರಮದ ಫಲಿತಾಂಶವಾಗಿದೆ. ಪ್ರಾರಂಭದಲ್ಲಿ, ‘ಇಂಟರ್ ಮೀಡಿಯೇಟ್ ಶೈಕ್ಷಣಿಕ ಕಾರ್ಯಕ್ರಮವನ್ನು ಹೊಂದಿದ ಕಾಲೇಜು 1953-54ನೇ ಶೈಕ್ಷಣಿಕ ವರ್ಷದಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟು ಕಲೆಯಲ್ಲಿ ಪದವಿ ಕೋರ್ಸ್ ಅನ್ನು ಪ್ರಾರಂಭಿಸಲಾಯಿತು.
ಮುಂದಿನ ವರ್ಷವೇ ವಿಜ್ಞಾನದ ಕೋರ್ಸ್‍ಗಳನ್ನು ಪರಿಚಯಿಸಲಾಯಿತು. ಮುಂದೆ ಈ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿತು. 1980ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸೇವನೆಯಾದ ಕಾರಣ ಈ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಯಿತು. 1988ರಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಕೋರ್ಸ್ ಅನ್ನು ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಕೆಲವು ಪ್ರಮುಖ ಹಳೆಯ ವಿದ್ಯಾರ್ಥಿಗಳು, ಚುನಾಯಿತ ಪ್ರತಿನಧಿಗಳು ಮತ್ತು ಕೊಡಗಿನ ನಾಗರಿಕರು ಕಾಲೇಜನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಯೋಜನಕಾರಿ ಕೈಯಲ್ಲಿ ಇರಿಸಲು ಅಮೂಲ್ಯವಾದ, ಸಲಹೆ ನೀಡಿದುದರ ಪರಿಣಾಮವಾಗಿ ಕಾಲೇಜನ್ನು 1993ರಲ್ಲಿ ಮಂಗಳೂರು, ವಿಶ್ವವಿದ್ಯಾನಿಲಯವು ಅದರ ಘಟಕ ಕಾಲೇಜುಗಳಲ್ಲಿ ಒಂದಾಗಿ ಸ್ವಾಧೀನಪಡಿಸಿಕೊಂಡಿತು. 1994ರಲ್ಲಿ ಸಶಸ್ತ, ಪಡಗಳ ಮೊದಲ ಕಮಾಂಡರ್-ಇನ್-ಚಿಫ್ ಮತ್ತು ಕೊಡಗಿನ ಕೆಚ್ಚೆದೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ಕಾಲೇಜಿಗೆ ಇಡಲಾಯಿತು. ಹಳೆಯ ಮುಖ್ಯ ಕಟ್ಟಡದೊಂದಿಗೆ ಹಲವ ನ್ಯೂನ್ಯತೆಗಳಿದ್ದರೂ, ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾಲೇಜು ರಭಸವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಿದೆ. ಕಾಲೇಜು ಪದವಿ ಮಟ್ಟದಲ್ಲಿ, ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ, ಬಿಎಸ್‍ಡ್ಬ್ಲೂ ಮತ್ತು ಬಿಎಹೆಚ್‍ಆರ್ ಡಿ ಮತ್ತುBA, Bsc, BCom, BBA, BCA, BSW ಮತ್ತು BAHRD ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಎಂ.ಕಾಂ, ಎಂ.ಎ ಇನ್ ಕೊಡವ ಭಾಷೆ, ಎಂ.ಎ. ಇನ್ ಇಂಗ್ಲೀಷ್, ಎಂಎ ಇನ್ ಎಕೊನಾಮಿಕ್, ಎಂಬಿಎ-ಟಿಟಿಎಂ, ಎಂಎಸ್‍ಸಿ ಫಿಸಿಕ್ಸ್, ಪಿಜಿ ಡಿಪ್ಲಮೋ ಇನ್ ಯೋಗ ಸೈನ್ಸ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಲ್ಲದೆ ಕಾಲೇಜ್ ನಲ್ಲಿ ಕೆಲವು ಸರ್ಟಿಫಿಕೇಟ್ ಮತ್ತು ಆಡ್ ಆನ್ ಕೋರ್ಸ್‍ಗಳು ನಡೆಯುತ್ತಿದೆ.
ಪಠ್ಯೇತರ ಚಟುವಟಿಳಿಗಳಾದ ಎನ್‍ಸಿಸಿ, ಎನ್‍ಎಸ್‍ಎಸ್, ಲಲಿತ ಕಲೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಲೇಜ್ ಗೆ ಮತ್ತು ಕೊಡಗು ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ. ಆರು ಮಂದಿ ಪ್ರಾಧ್ಯಾಪಕರನ್ನೊಳಗೊಂಡ ಬೋಧಕ ವರ್ಗದವರು ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಸಂಶೋಧನಾ ಲೇಖನಗಳು, ಕೃತಿಗಳು ಮತ್ತು ಪ್ರಾಜೆಕ್ಟ್ ಗಳ ಮೂಲಕ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕರ್ನಾಟಕ ಸರಕಾರ 2022 ನವೆಂಬರ್ ತಿಂಗಳಿನಲ್ಲಿ ಮಂಗಳೂರು ವಿಶ್ವವಿದ್ಯಾನಿಯದಿಂದ ಬೇರ್ಪಡಿಸಿ ನೂತನ ಕೊಡಗು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ ಮತ್ತು ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಹುದ್ದೆಗಳು, ಚರಾಸ್ತಿ ಮತ್ತು ಸ್ಥಿರಾಸ್ಥಿಗಳನ್ನು ನೂತನ ವಿಶ್ವ ವಿದ್ಯಾನಿಲಯಕ್ಕೆ ಸೇರಿಸುವ ಸಂಬಂಧವಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜ್ ಆಗಿದ್ದು, ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಸ್ತುತ ಕೊಡಗು ವಿಶ್ವವಿದ್ಯಾನಿಲಯದ ಘಟಕ ಕಾಲೇಜ್ ಆಗಿ ಮಾರ್ಪಾಡಾಗುತ್ತಿರುವ ಸಂಕೀರ್ಣ ಘಟ್ಟದಲ್ಲಿದೆ. ಮುಂದಿನ ವರ್ಷ 2024ಕ್ಕೆ ಕಾಲೇಜ್ ಗೆ 75 ವರ್ಷಗಳು ತುಂಬುತ್ತಿದ್ದು, ಅಮೃತ ಮಹೋತ್ಸವದ ಆಚರಣೆಯ ಹೊಸ್ತಿಲಲ್ಲಿದೆ.
ಪ್ರಸ್ತುತ 2023-24ನೇ ಸಾಲಿನಲ್ಲಿ ಕಾಲೇಜ್ ನಲ್ಲಿ ಸುಮಾರು 1500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 505 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದಾರೆ ಹಾಗೂ ದ್ವಿತೀಯ ಮತ್ತು ತೃತೀಯ ವರ್ಷದ 893 ಪದವಿ ವಿದ್ಯಾರ್ಥಿಗಳ ಜೊತೆಗೆ 65 ದ್ವಿತೀಯ ವಿದ್ಯಾರ್ಥಿಗಳು ಮಂಗಳೂರು. ವಿಶ್ವವಿದ್ಯಾನಿಲಯಕ್ಕೆ ಸೇರಿದವರಾಗಿದ್ದಾರೆ. ಕೊಡಗು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಈ ಕಾಲೇಜಿಗೆ 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಇನ್ನೂ ದಾಖಲಾಗಬೇಕಾಗಿದೆ.
::: ಸಾಧ್ಯವಾಗಬಹುದಾದ ಪರಿಹಾರಗಳು :::
ಮಂಗಳೂರು ವಿವಿ ವತಿಯಿಂದ ಬೇಕಾದ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡುವುದು ಅಥವಾ ಪ್ರಥಮ ವರ್ಷದ ಪದವಿ ತರಗತಿಗಳ ಪ್ರವೇಶಾತಿ ಶುಲ್ಕವನ್ನು ಸಂಗ್ರಹಿಸಿದ ಕೊಡಗು ವಿವಿ ವತಿಯಿಂದ 1/3ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡುವುದು,
ಹೊರಗುತ್ತಿಗೆ/ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯು ಅತ್ಯವಸಶ್ಯಕವಾಗಿರುವುದರಿಂದ ಅವರನ್ನು ಮಂಗಳೂರು ಮತ್ತು ಕೊಡಗು ವಿವಿ ವತಿಯಿಂದ ಕ್ರಮವಾಗಿ 2:1 ಅನುಪಾತದಲ್ಲಿ ನೇಮಕ ಮಾಡಿ 2023-24ನೇ ಸಾಲಿನಲ್ಲಿ ಮುಂದುವರೆಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು,
ಕಳೆದ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಬಿಲ್ಲುಗಳನ್ನು ತ್ವರಿತವಾಗಿ ಪರಿಶೀಲಿಸಿ ಹಣ ಮಂಜೂರು ಮಾಡುವುದು, ಸರಕಾರದ ವತಿಯಿಂದ ನೂತನ ಕೊಡಗು ವಿಶ್ವವಿದ್ಯಾನಿಲಯಕ್ಕೆ ಸಿಗಬೇಕಾದ ಧನಸಹಾಯ ಬಿಡುಗಡೆ ಮಾಡಬೇಕಿದೆ, ಕಾಲೇಜಿನಿಂದ ಮಂಗಳೂರು ವಿಶ್ವಿವದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾಲಯಗಳಿಗೆ ಮುಂದೆ ಸಲ್ಲಿಸಲಾಗುವ ಸಂಬಂಧಿಸಿದ ಬಿಲ್ಲುಗಳಿಗೆ ಆಯಾ ವಿಶ್ವವಿದ್ಯಾನಿಲಯಗಳಿಂದ ತ್ವರಿತವಾಗಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವುದು.
2023-24ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಶುಲ್ಕ ಪಾವತಿಸಿ ಸೇರಿದವಾಗಿರುತ್ತಾರೆ. ಆದುದರಿಂದ 2023-24ನೇ ಸಾಲಿನ ಆಯವ್ಯಯದಲ್ಲಿ ನಮ್ಮ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಂಚಿಕೆ ಮಾಡಲಾಗಿರುವ ಹಣವನ್ನು ಹಂಚಿಕೆ ಮಾಡಲಾಗಿರುವ ಹಣವನ್ನು ಸಲ್ಲಿಸಲಾಗುವ ಬಿಲ್ಲುಗಳಿಗೆ ವಿಳಂಬ ಮಾಡದೆ ಬಿಡುಗಡೆ ಮಾಡುವುದು, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯಗಳು ಇಂಟರ್ನೆಟ್ ಮತ್ತು ವಿದ್ಯುತ್ ಬಿಲ್ಲುಗಳನ್ನು ಪಾವತಿಸುವಂತೆ ಹಾಗೂ 2:1 ಅನಪಾತದಲ್ಲಿ ಹಣ ಮಂಜೂರು ಮಾಡಿ ಲ್ಯಾಬ್ ರಾಸಾನಿಕಗಳು, ಕಂಸ್ಯೂಮಬಲ್ಸ್ ಗಳನ್ನು ಒದಗಿಸಿಕೊಳ್ಳುವಂತೆ ಮಾಡುವುದು.
ಕಾಲೇಜಿನ ಹಳೆಯ ಮುಖ್ಯ ಶೈಕ್ಷಣಿಕ ಕಟ್ಟಡದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದು, ಪ್ರಸ್ತುತ ಕಾಲೇಜು ತನ್ನ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದು, 25 ತರಗತಿ ಕೊಠಡಿಗಳ ನೂತನ ಉಪನ್ಯಾಸ ಸಂಕೀರ್ಣ ಮತ್ತು ಆಡಳಿತ ಭವನ ನಿರ್ಮಾಣ ಮಾಡುವುದು.
ಕಾಲೇಜಿನಿಂದ ನಿರ್ದಿಷ್ಟ ದೂರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಹೊಸ ಪುರುಷರ ವಸತಿ ನಿಲಯದ ಕಟ್ಟಡ ನಿರ್ಮಾಣ ಮಾಡುವುದು, ಕನಿಷ್ಟ ಸಾವಿರ ಆಸನಗಳುಳ್ಳ ಸುಸಜ್ಜಿತ ಹೊಸ ಸಭಾಂಗಣದ ನಿರ್ಮಾಣ ಮಾಡುವುದು, ಕಾಲೇಜಿನ ಪ್ರಯೋಗಾಲಯಗಳು, ಕಚೇರಿ ಮತ್ತು ಗ್ರಂಥಾಲಯದ ಸೈಬರ್ ಲ್ಯಾಬಿಗೆ ಅತ್ಯವಿರುವ 250 ಕಂಪ್ಯೂಟರ್‍ಗಳನ್ನು ಒದಗಿಸುವುದು, ಎಲ್ಲಾ ತರಗತಿಗಳನ್ನು ಒದಗಿಸುವುದು. ಎಲ್ಲಾ ತರಗತಿಗಳ ಕೊಠಡಿಗಳಿಗೆ ಪ್ರೊಜೆಕ್ಟರ್ ಮತ್ತು ಇಂಟರ್ ನೆಟ್ ಸೇರಿದಂತೆ ಐಸಿಟಿ ಸೌಲಭ್ಯಗಳನ್ನು ಒದಗಿಸುವುದು.
ತರಗತಿಗಳ ಕೊಠಡಿಗಳಿಗೆ ಹೊಸ ಬೆಂಚು-ಡೆಸ್ಕ್ ಗಳನ್ನು ಒದಗಿಸುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಡಿಕೇರಿ ನಗರದಿಂದ ಕಾಲೇಜಿಗೆ ಪ್ರತಿದಿನ ಕನಿಷ್ಟ ನಾಲ್ಕು ಬಾರಿ ಸರಕಾರಿ ಅಥವಾ ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದು, ನೇಮಕಾತಿಯ ಸಂದರ್ಭದಲ್ಲಿ ಖಾಯಂ ಸಿಬ್ಬಂದಿಗಳಿಗೆ ನೀಡಲಾದ ಎಲ್ಲಾ ಸೇವಾ ಸೌಲಭ್ಯಗಳನ್ನು ಯಥಾಸ್ಥಿತಿಯಲ್ಲಿ ನೂತನ ವಿಶ್ವವಿದ್ಯಾಲಯದಲ್ಲಿಯೂ ಮುಂದುವರೆಸುವಂತೆ ರಾಜ್ಯ ಪತ್ರದಲ್ಲಿ ಉಲ್ಲೇಖಿಸುವಂತೆ ಕ್ರಮ ಕೈಗೊಳ್ಳುವುದು.
ವಿಶ್ವ ವಿದ್ಯಾಲಯದಲ್ಲಿ ಆಂತರಿಕ ಸಂಪನ್ಮೂಲದ ಕೊರತೆಯಿರುವುದರಿಂದ ಶೇ.14 ರಷ್ಟು ಎನ್‍ಪಿಎಸ್ ಪಾಲನ್ನು ಸರಕಾರವೇ ಸಿಬ್ಬಂದಿಗಳ ಎನ್‍ಪಿಎಸ್ ಖಾತೆಗೆ ಭರಿಸುವುದು. ನೂತನ ಕೊಡಗು ವಿಶ್ವವಿದ್ಯಾಲಯದಲ್ಲಿ ಉಳಿಯಲು ಇಚ್ಚಿಸುವ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ವೃತ್ತಿ ಪದೋನ್ನತಿಗಳನ್ನು ನೀಡುವುದು.
ಮಂಗಳೂರು ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರ ವೇತನವನ್ನು ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ಪಾವತಿಸುವಂತೆ ಕ್ರಮ ಕೈಗೊಳ್ಳುವುದು, ನೂತನ ಕೊಡಗು ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ಕಾಲೇಜಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಗಮನಿಸುತ್ತಿರುವ ವಿದ್ಯಾರ್ಥಿಗಳ ಬೇರೆ ವಿಶ್ವವಿದ್ಯಾಲಯಗಳ ಕಡೆ ಮುಖ ಮಾಡಿದ್ದಾರೆ. 259 ಸೀಟುಗಳಿಗೆ ಕೇವಲ 63 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಸ್ನಾತಕೋತ್ತರ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ತುರ್ತಾಗಿ ಕಾಲೇಜಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
ಜಗತ್ಪ್ರಸಿದ್ಧರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿನಲ್ಲಿ ನಡೆಯುತ್ತಿರುವ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಕೊಡಗಿನ ಪ್ರತಿಷ್ಠಿತ ಕಾಲೇಜಿನ ಸಮಗ್ರ ಬೆಳವಣಿಗೆಯನ್ನು ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಲ್ಲದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.











