ನಾಪೋಕ್ಲು ಅ.4 : ಬೆಟ್ಟಗೇರಿ ಸಮೀಪದ ಬಕ್ಕ ಸ್ವಸಹಾಯ, ಸ್ತ್ರೀ ಶಕ್ತಿ, ಗಜಾನನ ಭಕ್ತ ಮಂಡಳಿ ,ಸ್ವಸಹಾಯ ಗುಂಪುಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 17ನೇ ವರ್ಷದ ಕೈಲ್ ಪೋಳ್ಡ್ ಕ್ರೀಡಾಕೂಟ ನಡೆಯಿತು.
ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲಾ ಉತ್ತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರರಾದ ಸೂದನ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಎಲ್ ಕೆ ಜಿ ,ಯು ಕೆ ಜಿ ಮಕ್ಕಳಿಗೆ ಕಪ್ಪೆ ಹಾರುವುದು, ಮೆರಥಾನ್, 100 ಮೀಟರ್ ಓಟ,ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆ ಹಣ್ಣು ಚಮಚದ ಓಟ, ಬಕೇಟಿಗೆ ಚೆಂಡು ಹಾಕುವುದು, ಹಗ್ಗ ಜಗ್ಗಾಟ, ವಾದ್ಯ ಕುಣಿತ ಸೇರಿದಂತೆ ಕಿರಿಯರಿಂದ ವಯಸ್ಕರ ವರೆಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೊಟ ಸ್ಪರ್ಧೆಗಳು ನಡೆದವು.
ಸಭಾ ಕಾರ್ಯಕ್ರಮ : ಸಂಜೆ ನಡೆದ ಸಮರೋಪ ಸಮಾರಂಭವನ್ನು ಕ್ರೀಡಾ ಸಮಿತಿ ಅಧ್ಯಕ್ಷ ಬೈತಡ್ಕ ದೇವಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ತಹಶೀಲ್ದಾರ್ ಸೂದನ ಮೋಹನ್, ನಿವೃತ್ತ ಹಾನರರಿ ಕ್ಯಾಪ್ಟನ್ ಬಾಡನ ಲೋಕೇಶ್, ನ್ಯಾಯಾಧೀಶರಾದ ನೈಯ್ಯಣಿ ದಿನೇಶ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ಸುಷ್ಮಾ ದಿನೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಸೇರಿದಂತೆ ಎಲ್ಲಾ ಸಂಘ ಗಳ ಅಧ್ಯಕ್ಷರುಗಳು ಆಡಳಿತ ಮಂಡಳಿ ಮತ್ತು ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂದನ ಮೋಹನ್, ಕ್ರೀಡಾಕೂಟದಿಂದ ಪರಸ್ಪರ ಬಾಂಧವ್ಯ ಬೆಸೆಯುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಹೊರಬಂದು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಹಾನರರಿ ಕ್ಯಾಪ್ಟನ್ ಬಾಡನ ಲೋಕೇಶ್ ಮಾತನಾಡಿ, ತಮ್ಮ ಬಾಲ್ಯದ ಜೀವನವನ್ನು ನೆನೆಸಿಕೊಂಡು ಇತ್ತೀಚೆಗೆ ಜನರು ಹಳ್ಳಿಯಿಂದ ಪಟ್ಟಣದೆಡೆಗೆ ಮುಖ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಳ್ಳಿಯ ಸೊಗಡು ಕೃಷಿ ಚಟುವಟಿಕೆ ಕ್ರೀಡಾಕೂಟಗಳಿಂದ ಸಿಗುವ ಆನಂದ ಪಟ್ಟಣದಲ್ಲಿ ಸಿಗುವುದು ಅಸಾಧ್ಯ ಆದ್ದರಿಂದ ಇಲ್ಲಿಯ ಪರಿಸರವನ್ನು ಆಸ್ವಾದಿಸುತ್ತ ಆರೋಗ್ಯಕರ ಜೀವನವನ್ನು ನಡೆಸುವ ಮೂಲಕ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆಗೆ ಮುಂದಾಗಬೇಕು ಎಂದು ಹಿತ ನುಡಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ ಪುಟ್ಟ ಹಳ್ಳಿಯಲ್ಲಿ ಕೇವಲ ಸ್ವಸಹಾಯ ಸಂಘಗಳು ಸಾರ್ವಜನಿಕರ ಸಹಯೋಗದಲ್ಲಿ ಸತತ 17 ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ವಿಚಾರ. ಸಂಕುಚಿತ ಮನೋಭಾವನೆಯನ್ನು ಬಿಟ್ಟು ಸಮಾನ ಮನಸ್ಕರೊಂದಿಗೆ ದೂರಾಲೋಚನೆ ಮಾಡಿದಾಗ ಮಾತ್ರ ಇಂತಹ ಉತ್ತಮ ಕಾರ್ಯ ಚಟುವಟಿಕೆಗಳು ಮೂಡಿಬರಲು ಸಾಧ್ಯ ವಾಗುತ್ತದೆ ಎಂದ ಅವರು, ಬೆಟ್ಟಗೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೂ ಈ ಭಾಗದ ಜನರ ಸಹಕಾರವನ್ನು ಸ್ಮರಿಸಿದರು.
ಕ್ರೀಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಕನ್ನಡದ ಅಭಿಮಾನಿಗಳಾಗಬೇಕು ಎಂದರು. ಹಳ್ಳಿಗಳಲ್ಲಿ ನಡೆಯುವ ಜಾನಪದ ಕ್ರೀಡಾಕೂಟಗಳಿಂದ ಉತ್ತೇಜಿತರಾಗಿ ಮುಂದೆ ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರಮಟ್ಟದಲ್ಲಿ ಗುರುತಿ ಸಿಕೊಳ್ಳುವಂತಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯದರ್ಶಿ ಹೊಸೋಕ್ಲು ಮೊಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಕ್ರೀಡಾ ಸಮಿತಿ ಅಧ್ಯಕ್ಷ ಬೈತಡ್ಕ ದೇವಯ್ಯ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿ ಮುಂದೆಯೂ ಎಲ್ಲರ ಸಹಕಾರವನ್ನು ಬಯಸಿದರು.
ನೆಯ್ಯಣಿ ಸುಷ್ಮಾ ದಿನೇಶ್ ಮಾತನಾಡಿದರು.
ವೃಷ್ಟಿ ಮತ್ತು ಪಂಚಮಿ ಪ್ರಾರ್ಥಿಸಿದರು. ನೆಯ್ಯಣಿ ಹೇಮಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ.








