ಮಡಿಕೇರಿ ಅ.9 : ಜನರ ತೆರಿಗೆ ಹಣವನ್ನು ಉಚಿತ ಯೋಜನೆಗಳಿಗೆ ಹಂಚಿ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿ ಜನರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಜಿಲ್ಲಾ ಜೆಡಿಎಸ್ ಮಾಜಿ ವಕ್ತಾರ ಸೂದನ ಎಸ್.ಈರಪ್ಪ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿರುವುದು ಮತ್ತು ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ಬುದ್ಧಿವಂತ ಮತದಾರರು ಅರ್ಥಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ದೇಶದ ಭದ್ರತೆ-ರಾಷ್ಟ್ರ ಭಕ್ತಿಗೆ ಅನಿವಾರ್ಯವಾಗಿದೆ. ಅವರ ನೇತೃತ್ವದಿಂದ ಮಾತ್ರ ದೇಶ ಸುಗಮವಾಗಿ ಮುನ್ನಡೆಯಲು ಸಾಧ್ಯವೆಂಬುವುದು ಜನಸಾಮಾನ್ಯರ ಇಂಗಿತವಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಜೆಡಿಎಸ್ ಕಾರ್ಯಕರ್ತರು ಹಾಗೂ ತೆರೆಮರೆಯಲ್ಲಿರುವ ಪಕ್ಷದ ಎಲ್ಲಾ ಹಿತೈಷಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಯನ್ನು ಬೆಂಬಲಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿರುವುದು ಸಕಾಲದ ನಿರ್ಧಾರವಾಗಿದೆ. ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಹುಮ್ಮಸ್ಸು ಮೂಡಿಸಿದೆ. ಮೋದಿಯವರೇ ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎನ್ನುವುದು ಜನ್ನಾಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಕೊಡಗಿನ ಇಬ್ಬರು ಯುವ ಶಾಸಕರು ಉತ್ತಮ ಜನಪ್ರತಿನಿಧಿಗಳಾಗಿದ್ದಾರೆ. ಇವರುಗಳು ತಮ್ಮ ಶ್ರಮ ಮತ್ತು ವರ್ಚಸ್ಸಿನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆಯೇ ಹೊರತು ಕಾಂಗ್ರೆಸ್ಸಿನ ಬಲದಿಂದಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರುಗಳು ಇದ್ದರೂ ಪ್ರಜ್ಞಾವಂತ ಮತದಾರರು ಲೋಕಸಭೆಗೆ ಎನ್‍ಡಿಎ ಅಭ್ಯರ್ಥಿಯನ್ನೇ ಗೆಲ್ಲಿಸಿ ಕಳುಹಿಸಲಿದ್ದಾರೆ ಎಂದು ಸೂದನ ಈರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.










