ಮಡಿಕೇರಿ ಅ.11 : ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಬೆಳ್ಯಪ್ಪ ಸ್ಮಾರಕ ಸಭಾಭವನದಲ್ಲಿ ಸಮಾಜದ ನೂತನ ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ಕುಶಾಲಪ್ಪ, ಸ್ಥಾಪಕಾಧ್ಯಕ್ಷರಾಗಿ ಮುತ್ತಮ್ಮ ಕೋಟಿ, ಗೌರವಾಧ್ಯಕ್ಷರಾಗಿ ಎಮ್.ಡಿ.ನಾಣಯ್ಯ, ಉಪಾಧ್ಯಕ್ಷರಾಗಿ ಲಯನ್ ದಾಮೋದರ್, ಕಾರ್ಯದರ್ಶಿಯಾಗಿ ಅರುಣ್, ಖಜಾಂಚಿಯಾಗಿ ಗಿರೀಶ್ ಮಡಿಕೆಬೀಡು ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ದಿನೇಶ್ ಐಗೂರು, ಅಶ್ವತ್ ಮಡಿಕೆಬೀಡು, ಸುರೇಶ್ ಮಡಿಕೇರಿ, ಅಪ್ಪಾಜಿ, ಪುರುಷೋತ್ತಮ್, ಅಚ್ಚು ಐಗೂರು, ಕೆ.ವೈ.ವಿಠಲ, ಕಾಂತಿಮಣಿ ಮಡಿಕೇರಿ, ಸರಸ್ವತಿ ನೇಮಕಗೊಂಡರು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಂತರ ಮಾತನಾಡಿದ ಗೌರವ ಅಧ್ಯಕ್ಷ ಎಂ.ಡಿ.ನಾಣಯ್ಯ, ಸಂಘಟನೆ ಬಲಿಷ್ಠವಾದಾಗ ಮಾತ್ರ ಆ ಸಮಾಜವು ಅಭಿವೃದ್ಧಿ ಹೊಂದುತ್ತದೆ. ಅದರಂತೆ ಸಮುದಾಯ ಎಲ್ಲರೂ ಜೊತೆಗೂಡಿ ನಡೆಯಬೇಕು ಎಂದರು.
ಮುಂದಿನ ದಿನಗಳಲ್ಲಿ ನೂತನ ಸಮತಿಯು ಹೆಚ್ಚು ಕಾರ್ಯಪ್ರವೃತ್ತವಾಗಿ ಕೆಲಸ ಮಾಡಲಿ ಎಂದು ಶುಭಹಾರೈಸಿದರು.
ವ್ಯಾಂಡಮ್ ಎಂಟಪ್ರೈಸಸ್ನ ಮಾಲೀಕ ಲಯನ್ ದಾಮೋದರ್ ಎಲ್ಲರೂ ಒಗ್ಗೂಡಿದಾಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕು ಎಂದರು.
ನೂತನ ಅಧ್ಯಕ್ಷ ಕೆ.ಕುಶಾಲಪ್ಪ ಮಾತನಾಡಿ, ಎಲ್ಲರೂ ಒಟ್ಟಾಗಿ ಸಮಾಜದ ಬೆಳವಣಿಗೆಗೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸದಸ್ಯ ದಿನೇಶ್ ಐಗೂರು ಮಾತನಾಡಿ, ಸಂಘದ ಬೆಳವಣಿಗೆಗೆ ಯುವಕರ ಪಾತ್ರ ಮಹತ್ತರವಾದದ್ದು, ಅದಕ್ಕಾಗಿ ಯುವಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಚಂದ್ರಶೇಖರ್, ಅರುಣ್ ಕುಲಾಲ್ ಕೂಡಿಗೆ, ಅಶ್ವತ್ ಮಡಿಕೆಬೀಡು ಮಾತನಾಡಿ, ಸಂಘದ ಬೆಳವಣಿಗೆಗೆ ಪೂರಕವಾದ ಸಲಹೆ ನೀಡಿದರು.
ಇದೇ ಸಂದರ್ಭ ಉದ್ಯಮಿ ಲಯನ್ ದಾಮೋದರ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕುಲಾಲ ಕುಂಬಾರ ಸಮಾಜದಸಹಾಯಧನ ವಿತರಿಸಲಾಯಿತು.
ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಘಟಕ, ಯುವ ಘಟಕ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಕೈ ಗೊಳ್ಳಲಾಯಿತು.
ಹೊದ್ದೂರು ಬಾಂಧವರು, ಚೇರಂಬಾಣೆ ಸಂಘದ ಸದಸ್ಯರು, ಬೆಟ್ಟಗೇರಿ, ಮಡಿಕೆಬೀಡು ಬಾಂಧವರು, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ, ಶನಿವಾರಸಂತೆ ಘಟಕ ಸೇರಿದಂತೆ ಮಹಿಳಾ ಘಟಕದ ಸದಸ್ಯರು, ಯುವ ಘಟಕದ ಸದಸ್ಯರು ಹಾಜರಿದ್ದರು. ಭರತ್ ನಿರೂಪಿಸಿದರು, ಶ್ರುತಿಕಾ ಪ್ರಾರ್ಥಿಸಿದರು, ಅಶ್ವತ್ ಮಡಿಕೆ ಬೀಡು ವಂದಿಸಿದರು.










