ವಿರಾಜಪೇಟೆ ಅ.11 : ಕೊಡಗು ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ಛಾಯಾಚಿತ್ರಗಳ ಮೂಲಕ ಪ್ರಸಾರಪಡಿಸುವ ಹಾಗೂ ಕೊಡಗು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ಸಾಹಿ ಛಾಯಾಚಿತ್ರ ಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆ ಮತ್ತು ಸಾದಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕೊಡಗು ಕಲಾ ಉತ್ಸವದ ಅಂಗವಾಗಿ ಪ್ರಕೃತಿ ಸೌಂದರ್ಯ ಮತ್ತು ಪುರಾತನ ಕಟ್ಟಡಗಳ ಬಗ್ಗೆ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆ ಯ ಬಗ್ಗೆ ಮಾಹಿತಿ ನೀಡಿದ ಸಾದೀಕ್ ಆರ್ಟ್ಸ್ ಲಿಂಕ್ ನ ಸಂಚಾಲಕ ಸಾದೀಕ್ ಹಂಸ ಛಾಯಾಚಿತ್ರ ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯಲಿದ್ದು, ಕೊಡಗು ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತು ಪುರಾತನ ಕಟ್ಟಡಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಕಳುಹಿಸಬೇಕು. ಛಾಯಾಚಿತ್ರ ಗ್ರಾಹಕರು ಮತ್ತು ಹವ್ಯಾಸಿ ಛಾಯಾಚಿತ್ರ ಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಮುಕ್ತವಾಗಿದ್ದು ಎಲ್ಲಾ ವರ್ಗದ ವ್ಯಕ್ತಿಗಳು ಭಾಗವಹಿಸುವುದಾಗಿದೆ ಎಂದರು.
ಪ್ರವಾಸೋದ್ಯಮವನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು ಹಾಗೂ ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತದೆ. ಸೆರೆಯಾದ ಛಾಯಾಚಿತ್ರಗಳನ್ನು ಇಮೇಲ್ ವಿಳಾಸ kalaautsava@gmail.com ಮತ್ತು ವಾಟ್ಸಪ್ ಸಂಖ್ಯೆ 9845820257 ಗೆ ದಿನಾಂಕ 25-10-2023 ರ ಒಳಗೆ ಕಳುಹಿಸತಕ್ಕದ್ದು. ನಂತರ ಬರುವ ಛಾಯಾಚಿತ್ರಗಳನ್ನು ಪರಿಗಣಿಸುವುದಿಲ್ಲಾ. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ