ಮಡಿಕೇರಿ ಅ.11 : ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರುವಂತೆ ಮತ್ತು ಮುಸ್ಲಿಮರ 2ಬಿ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಏರಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ, ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, 2014ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗವನ್ನು ನೇಮಿಸಿ ಜನಗಣತಿಗೆ ಆದೇಶಿಸಿದ್ದರು. ಅದರಂತೆ 2018ರಲ್ಲಿ ಆಯೋಗವು ವರದಿ ಸಿದ್ದಪಡಿಸಿತ್ತು. ಆದರೆ ಕಾರಣಾಂತರಗಳಿಂದ ವರದಿ ಪ್ರಕಟಗೊಂಡಿರಲಿಲ್ಲ. ನಂತರ ಬಂದ ಸರ್ಕಾರಗಳು ವರದಿಯನ್ನು ಅಂಗೀಕರಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಇದೀಗ ಕಾಂತರಾಜು ಆಯೋಗ ವರದಿ ಸಿದ್ದವಿದ್ದು, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಲು ತಕ್ಷಣವೇ ಅಂಗೀಕರಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
2ಬಿ ಮೂಲಕ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡುವ ನಿರ್ಣಯ ಕೈಗೊಂಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ ಅದನ್ನು ಹಿಂಪಡೆಯಬೇಕು. ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ 2ಬಿ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕೆಂದು ಅಬ್ದುಲ್ ಅಡ್ಕರ್ ಆಗ್ರಹಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಜನಾಂದೋಲ ರೂಪಿಸುವ ಮೂಲಕ ಸರ್ಕಾರದ ವಿರುದ್ದ ಹೋರಾಟವನ್ನು ತೀವ್ರಗೊಳಿಸುವುದಾಗಿ ಅಬ್ದುಲ್ ಅಡ್ಕರ್ ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಆಲಿ, ನೀಮಾ ಅರ್ಷದ್, ಮೇರಿ ವೇಗಸ್, ವಿಮ್ ಅಧ್ಯಕ್ಷೆ ಸೆಲಿಕತ್, ಎಸ್‍ಡಿಟಿಯು ಅಧ್ಯಕ್ಷ ಶರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮ್ಮದ್, ಎಸ್‍ಡಿಪಿಐ ನಗರಾಧ್ಯಕ್ಷ ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.









