ಮಡಿಕೇರಿ ಅ.12 : ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಪೋಷಕರು ಶಿಕ್ಷಕರು ಒಂದಾಗಿ ಮುನ್ನಡೆಯಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಅಧ್ಯಕ ಕೆ.ಪಿ.ಮಾಥ್ಯೂ ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಲೇಜು ಸಮಾಜಕ್ಕೆ ಮಹನೀಯ ಸಾಧಕರನ್ನು ಕೊಡುಗೆಯಾಗಿ ನೀಡಿದೆ. ಚಾರಿತ್ರಿಕವಾಗಿ ಕಾಲೇಜಿಗೆ ಮಹತ್ತರವಾದ ಸ್ಥಾನಮಾನ ಇದೆ. ಆ ಹಾದಿಯನ್ನು ಕಾಲೇಜಿನ ಚರಿತ್ರೆಗೆ ಕುಂದುಬರದಂತೆ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವುಗಳು ರೂಪುರೇಷೆ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ಕಾಲೇಜಿಗೆ 75 ವರ್ಷಗಳ ಸುದೀರ್ಘ ಇತಿಹಾಸ ಇದೆ. ಮುಂದಿನ ವರ್ಷ ಕಾಲೇಜು ತನ್ನ 75 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿದೆ. ಕಾಲೇಜು ಶೈಕ್ಷಣಿಕವಾಗಿ ಮಹೋನ್ನತವಾದ ಸಾಧನೆಯನ್ನು ತನ್ನ ಚರಿತ್ರೆಯ ಪುಟದಲ್ಲಿ ದಾಖಲಿಸಿದೆ. ಈ ಬಾರಿ ಅತೀ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಶಿಸ್ತು ಪಾಲನೆಯ ಹಿನ್ನೆಲೆಯಿಂದ ಮತ್ತು ವಿದ್ಯಾರ್ಥಿಗಳು ಕೆಟ್ಟ ಹಾದಿ ತುಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಕಾಲೇಜಿನಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಈ ಶಿಸ್ತುಪಾಲನೆಯನ್ನು ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಪಾಲಿಸುವ ಮೂಲಕ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಎಂಥಹ ವಿಷಮ ಪರಿಸ್ಥಿಯಲ್ಲೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವುದೇ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿಗೆ ವಿದ್ಯಾರ್ಥಿಗಳು ಮೊಬೈಲ್ ತರದಂತೆ ನೋಡಿಕೊಳ್ಳವುದಾಗಿಯೂ, ಕಾಲೇಜಿನಲ್ಲಿ ಮೊಬೈಲ್ ಬಳಸದಂತೆ ಕಟ್ಟು ನಿಟ್ಟಾಗಿ ಕ್ರಮಕೈಗೊಳ್ಳುವಂತೆಯೂ ಪೋಷಕರಾದ ಮಂಜುನಾಥ್, ಪುಟ್ಟ ಸ್ವಾಮಿ ಸೇರಿದಂತೆ ಇತರ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೋಷಕ ಸುನಿಲ್ ಕುಮಾರ್ ಮಾತನಾಡಿ, ಎನ್‍ಇಪಿ ಯಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಯಿತು. ಸದರಿ ವಿಶ್ವವಿದ್ಯಾನಿಲಯದ ಈ ಗೊಂದಲದ ಬಗ್ಗೆ, ಎನ್ ಇ ಪಿ, ಎಸ್ ಇ ಪಿ ಶೈಕ್ಷಣಿಕ ಕ್ರಮದ ಬಗ್ಗೆ ಸರ್ಕಾರಗಳು ಮೌನವಹಿಸದೆ ಸರಿಯಾದ ಮಾರ್ಗಸೂಚಿ ರೂಪಿಸಬೇಕು ಎಂದರು.
ಕಾಲೇಜು ರೂಪಿಸಿಕೊಂಡಿರುವ ಶಿಸ್ತುಪಾಲನಾ ಕಾನೂನುಗಳು ಹಾಗೇ ಮುಂದುವರೆಯಲಿ. ಆದರೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸುವ ಕಡೆಗೆ ಸರಕಾರ ಮತ್ತು ವಿಶ್ವವಿದ್ಯಾನಿಲಯ ಗಮನ ಹರಿಸಬೇಕು ಎಂದು ಪೋಷಕರಾದ ಕೆ.ಕೆ.ತಿಮ್ಮಣ್ಣ ಅಭಿಪ್ರಾಯ ಮುಂದಿಟ್ಟರು.
ಪೋಷಕರು ಮುಂದಿಟ್ಟ ಎಲ್ಲಾ ಆಶೋತ್ತರಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
2023-24ನೇ ಸಾಲಿನ ಪೋಷಕ ಶಿಕ್ಷಕ ಸಂಘವನ್ನು ಪುನರ್ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ಅಧ್ಯಕ್ಷರಾಗಿ ಕೆ.ಪಿ.ಮ್ಯಾಥ್ಯೂ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಜಯಂತಿ ರೈ, ಕಾರ್ಯದರ್ಶಿಯಾಗಿ ಹಿಂದಿ ವಿಭಾಗದ ಮುಖ್ಯಸ್ಥ ಬಿ.ಹೆಚ್.ತಳವಾರ, ಉಪಕಾರ್ಯದರ್ಶಿಯಾಗಿ ಕೆ.ಕೆ.ತಿಮ್ಮಣ್ಣ, ಕೋಶಾಧಿಕಾರಿಯಾಗಿ ಡಾ. ಜೆ.ಜಿ.ಮಂಜುನಾಥ ಆಯ್ಕೆಯಾದರು.
ಪೋಷಕ ಸದಸ್ಯರಾಗಿ ಪ್ರಕಾಶ್ ಪಿ.ಎ.ಸೀತಾ, ಜಲಜ, ಸುನೀಲ್ ಕುಮಾರ್, ಕೆ.ಎ.ಗೀತಾ, ಪೂರ್ಣಿಮಾ, ಬಿ.ಎಲ್.ರೈ, ಕೆ.ಎಸ್.ನರೇಂದ್ರ, ಕೆ.ಎಂ.ಗೋಕುಲ್, ಬಿ.ಟಿ.ರಮೇಶ್, ದೇವಯ್ಯ, ಹೆಚ್.ಎನ್.ಶ್ರೀಧರ್, ಮೇರಿ ಶೀಲ, ರಾಮಚಂದ್ರ, ಯಶೋಧ ನೇಮಕಗೊಂಡರು.
ಅಧ್ಯಾಪಕ ಸದಸ್ಯರಾಗಿ ಪ್ರೊ. ವಿಜಯಲತ, ಎಂ.ಎನ್.ರವಿಶಂಕರ್, ಕೆ.ಎಂ.ಪೂಣಚ್ಚ, ಡಾ.ಮಹದೇವಯ್ಯ, ಡಾ. ನಯನ ಕಶ್ಯಾಪ್, ಡಾ. ಎನ್.ವಿ. ಕರುಣಾಕರ ಆಯ್ಕೆಯಾದರು.
ಸಭೆಯನ್ನು ಡಾ. ಕೆ.ಹೆಚ್.ಮುಸ್ತಾಫ ನಿರೂಪಿಸಿರು. ತೃತೀಯ ವರ್ಷದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಮಹದೇವಯ್ಯ ಸ್ವಾಗತಿಸಿ, ಹಿಂದಿ ವಿಭಾಗದ ಮುಖ್ಯಸ್ಥ ಬಿ.ಹೆಚ್.ತಳವಾರ ವಂದಿಸಿದರು.
ಗಣಕ ವಿಭಾಗದ ಪ್ರಾಧ್ಯಾಪಕ ಎಂ.ಎನ್.ರವಿಶಂಕರ್, ಆಂಗ್ಲ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪೂಣಚ್ಚ, ಕನ್ನಡ ವಿಭಾಗದ ಡಾ. ಎನ್.ವಿ.ಕರುಣಾಕರ ಹಾಜರಿದ್ದರು.