ಮಡಿಕೇರಿ ಅ.13 : ಸ್ವಚ್ಛ ಕಾವೇರಿಗಾಗಿ ಅ.20 ರಿಂದ ನ.13ರ ವರೆಗೆ ಕಾವೇರಿ ಜಾಗೃತಿ ರಥಯಾತ್ರೆ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಅಶ್ರಯದಲ್ಲಿ ಅ.20ರಿಂದ ನ.13ರವರೆಗೆ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿಯಿಂದ ಪೊಂಪ್‌ಹಾರ್ ವರೆಗೆ ಯಾತ್ರೆ ಕೈಗೊಳ್ಳಲಾಗಿದ್ದು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಸುಮಾರು 40ಕ್ಕೂ ಅಧಿಕ ಸಾಧುಸಂತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅ.20 ರಂದು ಬೆಳಗ್ಗೆ 8.30 ಗಂಟೆಗೆ ತಲಕಾವೇರಿಯಲ್ಲಿ ಕಾವೇರಿ ಯಾತ್ರೆಗೆ ಚಾಲನೆ ದೊರೆಯಲಿದ್ದು, 10.30ಕ್ಕೆ ಭಾಗಮಂಡಲ ಸಂಗಮದಲ್ಲಿ ಆರತಿ, ಸಂಜೆ 4 ಗಂಟೆಗೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ 150ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಅ.21ರಂದು ಬೆಳಗ್ಗೆ ರಾಮನಾಥಪುರ, ನಂತರ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಮಹಾ ಆರತಿ ನಡೆಯಲಿದೆ. ಅ.22ರಂದು ತಮಿಳುನಾಡಿನತ್ತ ಯಾತ್ರೆ ಸಾಗಲಿದ್ದು, ನ.13 ರಂದು ತಮಿಳುನಾಡಿನ ಪೊಂಪ್‌ಹಾರ್ ರ್‍ನಲ್ಲಿ ಕಾವೇರಿ ನದಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಆರತಿ ಜರುಗಲಿದ್ದು, ಅಲ್ಲಲ್ಲಿ ಸಂವಾದ, ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಚಂದ್ರಮೋಹನ್ ತಿಳಿಸಿದರು.
ಯಾತ್ರೆಯಲ್ಲಿ ಕಾವೇರಿ ನದಿ ಸಂರಕ್ಷಣಾ ಅಭಿಯಾನ ಸಂಯೋಜಕ ಡಾ.ಭಾನುಪ್ರಕಾಶ್ ಶರ್ಮ, ಕಾವೇರಿ ತೀರ್ಥಯಾತ್ರಾ ಸಮಿತಿ ಸ್ಥಾಪಕ ಅಧ್ಯಕ್ಷ ಶ್ರೀ ಗಣೇಶ ಸ್ವರೂಪಾನಂದ ಸ್ವಾಮೀಜಿ, ಅಖಿಲ ಭಾರತೀಯ ಸನ್ಯಾಸಿ ಸಂಘದ ಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಸ್ವಾಮಿ ಆತ್ಮಾನಂದ, ಸಂಚಾಲಕ ಸ್ವಾಮಿ ವೇದಾನಂದ ಸೇರಿದಂತೆ ಮತ್ತಿರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇಂದು ಸರ್ಕಾರಗಳು ಬದಲಾಗುತ್ತಿದೆ. ಆದರೆ, ಕಾವೇರಿಯ ಪರಿಸ್ಥಿತಿ ಮಾತ್ರ ಹಾಗೆ ಇದೆ. ಕಾವೇರಿ ರಕ್ಷಣೆಯ ಸಂಬಂಧ ಸರ್ಕಾರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಇತ್ತ ತಮಿಳುನಾಡಿನಲ್ಲಿ ಕೂಡ ರಕ್ಷಣೆಗೆ ಯೋಜನೆಗಳನ್ನು ರೂಪಿಸಿಲ್ಲ. ಆದ್ದರಿಂದ ಕಾವೇರಿಯ ರಕ್ಷಣೆಗಾಗಿ ಸರ್ಕಾರಗಳು ನೂತನ ಯೋಜನೆಗಳನ್ನು ರೂಪಿಸಬೇಕು ಎಂದು ಚಂದ್ರಮೋಹನ್ ಮನವಿ ಮಾಡಿದರು.
ಕಾವೇರಿ ತೀರ್ಥಯಾತ್ರಾ ಸಮಿತಿ ಸ್ಥಾಪಕ ಅಧ್ಯಕ್ಷ ಗಣೇಶ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಕಾವೇರಿ ಪವಿತ್ರ ನದಿ. ಆದರೆ, ಇಂದು ಹೆಚ್ಚಾಗಿ ತ್ಯಾಜ್ಯಗಳು ಸೇರ್ಪಡೆಗೊಂಡು ಮಲೀನಗೊಳ್ಳುತ್ತಿದ್ದಾಳೆ. ಅದನ್ನು ಕಾಪಾಡುವ ದೃಷ್ಠಿಯಿಂದ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯಾತ್ರೆ ಸಂದರ್ಭ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಬೋಸ್ ಮೊಣ್ಣಪ್ಪ, ಪ್ರಮುಖರಾದ ಓಂಕಾರ ಸ್ವಾಮಿಜಿ ಉಪಸ್ಥಿತರಿದ್ದರು.









