ಮಡಿಕೇರಿ ಅ.13 : ನಗರದ ಗಾಂಧಿ ಮಂಟಪದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಸ್ಮಾರಕ ಉದ್ಯಾನವನ’ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂಬಂಧ ಶಾಸಕರಾದ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಯಿತು.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್ ಇತರರ ಉಪಸ್ಥಿತಿಯಲ್ಲಿ ಚರ್ಚೆ ನಡೆಯಿತು.
ಈಗಾಗಲೇ ಸರ್ಕಾರದಿಂದ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಮಹಾತ್ಮ ಗಾಂಧೀಜಿಯವರ ಚಿತಾ ಭಸ್ಮವಿಟ್ಟು ಶಾಶ್ವತವಾದ ಸ್ಮಾರಕ ಉದ್ಯಾನವನ ನಿರ್ಮಾಣ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಅಕ್ಟೋಬರ್, 17 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ ನೆರವೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಿಸುವಲ್ಲಿ ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಹೊಸ ತಂತ್ರಜ್ಞಾನದಂತೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು. ಜೊತೆಗೆ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನವನ ನಿರ್ಮಾಣ ಸಂಬಂಧ ಯೋಜನೆಯಂತೆ ಕಾಮಗಾರಿ ಕೈಗೊಳ್ಳುವಂತೆ ಸಲಹೆ ಮಾಡಿದರು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಅವರು ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಗಾಂಧಿ ಸ್ಮಾರಕ ಉದ್ಯಾನವನ ಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಲಿಯಾಕತ್ ಅಲಿ, ಅಂಬೆಕಲ್ಲು ನವೀನ್ ಇತರರು ಹಲವು ಮಾಹಿತಿ ನೀಡಿದರು.
ಮತ್ತಷ್ಟು ಮಾಹಿತಿ: ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ದೆಹಲಿಯ ರಾಜಘಾಟ್‍ನಲ್ಲಿ ಇರುವಂತೆ ಗಾಂಧಿ ಮೈದಾನ ಬಳಿ ಇರುವ ಗಾಂಧಿಮಂಟಪದ ಸ್ಥಳದಲ್ಲೇ ಶಾಶ್ವತವಾದ ಸ್ಮಾರಕ ಉದ್ಯಾನವನ್ನು ನಿರ್ಮಿಸುವ ಸಲುವಾಗಿ ಸರ್ವೋದಯ ಸಮಿತಿಯವರು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಸರ್ಕಾರ 2023 ರ ಮಾರ್ಚ್ ತಿಂಗಳಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿದೆ.
ಆ ನಿಟ್ಟಿನಲ್ಲಿ ಗಾಂಧಿ ಮಂಟಪ ಸರ್ವೇ ಸಂಖ್ಯೆ 471/1 ರಲ್ಲಿ 12 ಸೆಂಟ್ ಹಾಗೂ ಸರ್ವೆ ಸಂಖ್ಯೆ 471/4 ರಲ್ಲಿ 0.20 ಸೆಂಟ್ ಒಟ್ಟು 0.32 ಸೆಂಟ್ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿದ್ದು, ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಇಟ್ಟು ಶಾಶ್ವತವಾದ ಸ್ಮಾರಕ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ.








