ಮಡಿಕೇರಿ ಅ.14 : ಲೋಕಾಯುಕ್ತಕ್ಕೆ ದೂರು ಬಾರದಂತೆ ಅಧಿಕಾರಿಗಳು ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಅವರು ಸಲಹೆ ಮಾಡಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರು ಮಾತನಾಡಿದರು.
ಲೋಕಾಯುಕ್ತಕ್ಕೆ ದೂರು ಬಂದು ವಿಚಾರಣೆ ಆರಂಭಿಸಿದರೆ ಅಲೆಯಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುಂಬಾ ಎಚ್ಚರವಹಿಸಬೇಕು. ಆದ್ದರಿಂದ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ಸೇವೆಯನ್ನು ಸರ್ಕಾರದ ಸೇವೆ ಎಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಕಚೇರಿಗೆ ಆಗಮಿಸಿದಾಗ ಅವರ ಕುಂದುಕೊರತೆಯನ್ನು ಸಮಾದಾನದಿಂದ ಆಲಿಸಬೇಕು. ಕಚೇರಿಗೆ ಬಂದವರನ್ನು ಕೂರಿಸಿ ಮಾತನಾಡಬೇಕು ಎಂದು ಸುರೇಶ್ ಬಾಬು ಅವರು ಸಲಹೆ ಮಾಡಿದರು.
ಸರ್ಕಾರಿ ಸೇವೆಗೆ ಸೇರಿದವರು ಸಾರ್ವಜನಿಕರ ಕರ್ತವ್ಯ ನಿರ್ವಹಿಸಲು ಬಂದಿರುವುದು ಎಂಬುದನ್ನು ಅರಿತುಕೊಳ್ಳಬೇಕು. ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು ಎಂದು ಹೇಳಿದರು.
ಜನರ ನಿರೀಕ್ಷೆಯನ್ನು ಅಲ್ಪಸ್ವಲ್ಪವನ್ನಾದರೂ ಈಡೇರಿಸಿದರೆ ಆತ್ಮತೃಪ್ತಿ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸುವಂತೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಅವರು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿದ್ದಾರೆ. ಸೈನಿಕರ ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್‌ಪಿ ಅವರು ಸಲಹೆ ನೀಡಿದರು.
ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಅವರು ಮಾತನಾಡಿ ಲೋಕಾಯುಕ್ತ ಸಭೆಗೆ ಎಲ್ಲಾ ಹಂತದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ತಳ ಮಟ್ಟದ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟು ಸುಮ್ಮನಿರಬಾರದು ಎಂದು ತಾಕೀತು ಮಾಡಿದರು.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಲೋಕೇಶ್ ಅವರು ಮಾತನಾಡಿ ಕಚೇರಿಗೆ ಯಾರೇ ಬಂದರು ಸಹ ಸಂದರ್ಶಕರ ಹೆಸರು, ಮಾಹಿತಿಯನ್ನು ಬರೆಸಿಕೊಳ್ಳಬೇಕು. ಕಚೇರಿ ಕಾರ್ಯನಿರ್ವಹಣೆಯನ್ನು ಸರಿಯಾಗಿ ಜತನ ಮಾಡಬೇಕು ಎಂದು ಅವರು ತಿಳಿಸಿದರು.
ಶುಕ್ರವಾರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಖಾತೆ ಬದಲಾವಣೆ, ಸರ್ವೇ ಮಾಡುವುದು, ಮತ್ತಿತರ ಅರ್ಜಿಗಳು ಸಲ್ಲಿಕೆಯಾದವು. ಈ ಸಂದರ್ಭದಲ್ಲಿ ಎಂ.ಬಿ.ದೇವಯ್ಯ ಅವರು ಗೋಮಾಳ ಸರ್ವೇ ಮಾಡಿಸಬೇಕು ಎಂದು ಲೋಕಾಯುಕ್ತ ಎಸ್‌ಪಿ ಅವರಿಗೆ ಮನವಿ ಮಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸಾರ್ವಜನಿಕರಿಂದ 12 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿ 2 ಅರ್ಜಿದಾರರಿಗೆ ಲೋಕಾಯುಕ್ತ ಸಂಸ್ಥೆಯ ನಮೂನೆ 1 ಮತ್ತು 2 ನ್ನು ನೀಡಲಾಯಿತು. ಉಳಿದಂತೆ 10 ಅರ್ಜಿಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್, ಸರ್ವೆ ಇಲಾಖೆ, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಅಗ್ನಿಶಾಮಕ ಇಲಾಖೆ ಗ್ರಾಮಾಂತರ ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಅರ್ಜಿಯನ್ನು ವಿಚಾರಣೆ ಮಾಡಲಾಯಿತು.












