ಮಡಿಕೇರಿ ಅ.14 : ಅ.24ರ ರಾತ್ರಿ ದಶಮಂಟಪಗಳು ನಗರದಲ್ಲಿ ಶೋಭಾ ಯಾತ್ರೆ ನಡೆಸುತ್ತವೆ. ಈ ವೇಳೆ ಎಲ್ಲಾ ದಶ ಮಂಟಪಗಳು ಹೆಚ್ಚು ಪ್ರದರ್ಶನ ನೀಡಬೇಕೆಂದು ಸೂಚಿಸಲಾಗಿದೆ. ಮಾತ್ರವಲ್ಲದೇ ಹೆಚ್ಚು ಪ್ರದರ್ಶನ ನೀಡುವ ಮಂಟಪಕ್ಕೆ ವಿಶೇಷ ಬಹುಮಾನವನ್ನು ದಸರಾ ಸಮಿತಿಯಿಂದ ನೀಡಲಾಗುತ್ತದೆ ಎಂದು ಅನಿತಾ ಪೂವಯ್ಯ ತಿಳಿಸಿದರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ 2 ಕೋಟಿ ರೂ. ಅನುದಾನದ ಮೂಲಕ ಮಡಿಕೇರಿ ದಸರಾವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಚಿಂತಿಸಲಾಗಿತ್ತು. ಆದರೆ ಬರದ ಹಿನ್ನೆಲೆಯಲ್ಲಿ ಸರಕಾರ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಮಡಿಕೇರಿ ದಸರಾ ಆಚರಣೆ ಕಷ್ಟಸಾಧ್ಯವಾಗಲಿದೆ. ಈ ಕಾರಣದಿಂದ ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಲು ದಸರಾ ಸಮಿತಿ ಮುಂದಾಗಿದ್ದು, ಈ ಹಣದಲ್ಲಿ ದಶ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಲು ಯೋಜನೆ ರೂಪಿಸಲಾಗುತ್ತಿದೆ. ದೇಣೆಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ನಗರ ಸಭೆ ಪೌರಾಯುಕ್ತರೇ ದೇಣಿಗೆ ವಿಚಾರದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅ.15ರಂದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕರಗ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ವೇಳೆ ದಸರಾಗೆ ಹೆಚ್ಚಿನ ಅನುದಾನ ಒದಗಿಸಲು ಕೋರಲಾಗುತ್ತಿದ್ದು, ಹೆಚ್ಚಿನ ಅನುದಾನ ತರುವ ಬಗ್ಗೆ ಪ್ರಯತ್ನಗಳು ಸಾಗಿದೆ ಎಂದು ಪ್ರಕಾಶ್ ಆಚಾರ್ಯ ಹೇಳಿದರು.











