ಮಡಿಕೇರಿ ಅ.15 : ಮಡಿಕೇರಿ ದಸರಾ ಕರಗ ಮಹೋತ್ಸವಕ್ಕೆ ಭಾನುವಾರ ಶ್ರದ್ಧಾಭಕ್ತಿಯಿಂದ ಚಾಲನೆ ದೊರೆಯಿತು. ಆ ಮೂಲಕ ನಾಲ್ಕು ಶಕ್ತಿ ದೇವತೆಗಳು ನಗರ ಸಂಚಾರವನ್ನು ಆರಂಭಿಸಿದವು.
ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯ, ಶ್ರೀದಂಡಿನ ಮಾರಿಯಮ್ಮ ದೇವಾಲಯ, ಶ್ರೀಕೋಟೆ ಮಾರಿಯಮ್ಮ ದೇವಾಲಯ ಮತ್ತು ಶ್ರೀಕಂಚಿ ಕಾಮಾಕ್ಷಿ ದೇವಾಲಯಗಳ ಕರಗಗಳಿಗೆ ನಗರದ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕರಗೋತ್ಸವಕ್ಕೆ ಚಾಲನೆ ನೀಡಲಾಯಿತು.
ಕುಂದೂರು ಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಚಾಮಿ, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಉಮೇಶ್, ಶ್ರೀಕೋಟೆ ಮಾರಿಯಮ್ಮ ದೇವಾಲಯ ಕರಗವನ್ನು ಅನೀಸ್ ಹಾಗೂ ಶ್ರೀಕಂಚಿ ಕಾಮಾಕ್ಷಿ ದೇವಾಲಯದ ಕರಗವನ್ನು ಕಾರ್ತಿಕ್ ಅವರು ಹೊತ್ತಿದ್ದರು. ನಾಲ್ಕು ಕರಗಗಳು 9 ದಿನಗಳ ನಗರ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಲಿವೆ.
ಪಂಪಿನಕೆರೆಯಲ್ಲಿ ಪೂಜೆ ಸಲ್ಲಿಸುವ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವೇದಿಕೆ ಸಮಿತಿ ಅಧ್ಯಕ್ಷ ಕವಿತಾ, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ದಸರಾ ಸಮಿತಿ ಗೌರವ ಅಧ್ಯಕ್ಷ ಜಿ.ರಾಜೇಂದ್ರ, ಗೌರವ ಸಲಹೆಗಾರರಾದ ಜಿ.ಚಿದ್ವಿಲಾಸ್, ಖಜಾಂಚಿ ಅರುಣ್ ಶೆಟ್ಟಿ, ನಗರಸಭಾ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು.













