ಸೋಮವಾರಪೇಟೆ ಅ.15 : ಚಿತ್ರದುರ್ಗ ಬೃಹನ್ಮಠಕೆ ಸೇರಿದ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ ನಡೆದು ಕೆಲಕಾಲ ಬೇಳೂರು ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ.
ಪೋಕ್ಸೋ ಮೋಖದಮ್ಮೆಯಿಂದಾಗಿ ಮುರುಘಾ ಶರಣರು ಜೈಲು ಸೇರಿದ ನಂತರ ಮುರುಘಾ ಮಠದ ವಿಚಾರಗಳು ಒಂದೊಂದಾಗಿ ವಿವಾದ ಪಡೆದುಕೊಳ್ಳುತ್ತಿವೆ.
ಕೊಡಗು ಜಿಲ್ಲೆಯಲ್ಲೂ ಅಂದಿನ ರಾಜರು ನೀಡಿದ 3500 ಎಕರೆ ಜಮೀನು ಇಂದು ಕೇವಲ 550 ಎಕರೆಗೆ ಬಂದು ನಿಂತಿದೆ. ಉಳುವವನಿಗೆ ಭೂಮಿ ಕಾಯಿದೆ ಅನ್ವಯ ಒಂದಷ್ಟು ಭೂಮಿ ಉಳುವವರ ಪಾಲಾದರೆ ಬಹುತೇಕ ಭೂಮಿ ಅನಧಿಕೃತವಾಗಿ ಪರಭಾರೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ತಿಳಿದು ವರದಿ ನೀಡಲು ಬೃಹನ್ಮಠದ ಆಡಳಿತಾಧಿಕಾರಿಗಳು, ಮಠದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ವಿಶ್ವನಾಥ್ ಅವರು ಶನಿವಾರ ಜಿಲ್ಲೆಗೆ ಆಗಮಿಸಿ ಚಂಗದಹಳ್ಳಿ ಮಠದಲ್ಲಿ ಮಾಹಿತಿ ಸಂಗ್ರಹಿಸಿದರು.
ಭಾನುವಾರ ಬೇಳೂರು ಮಠಕ್ಕೆ ಸೇರಿದ ಮಾದಾಪುರ, ಗುತ್ತಿಮಠ ಮತ್ತು ಅಭಿಮಠಕ್ಕೆ ಸೇರಿದ ಜಮೀನಿನ ವಿವರ ಸಂಗ್ರಹಿಸಲು ತೆರಳುತ್ತಿದ್ದ ಸಂದರ್ಭ ಈ ಬಗ್ಗೆ ಮಾಹಿತಿ ತಿಳಿದ ವೀರಶೈವ ಮುಖಂಡರು ಹಾಗೂ ಕೆಲವು ಗ್ರಾಮಸ್ಥರು ಬೇಳೂರು ಮಠಕ್ಕೆ ದೌಡಾಯಿಸಿ ನೀವು ಬರುವ ವಿಚಾರ ಯಾರಿಗೂ ಗೊತ್ತಿಲ್ಲ, ಹೀಗೆ ಏಕಪಕ್ಷೀಯವಾಗಿ ಮಾಹಿತಿ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿಗಳ ಪ್ರತಿನಿಧಿ ವಿಶ್ವನಾಥ್, ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ನೀಡಿ ವರದಿ ನೀಡಲು ಹೇಳಿದ್ದಾರೆ. ಆದರೆ ಯಾರೊಂದಿಗೂ ನಾನು ಸಭೆ ನಡೆಸುವಂತಿಲ್ಲ, ನಿಮ್ಮ ಬಳಿ ಏನಾದರು ಮಾಹಿತಿ ಇದ್ದರೆ ನೀಡಿ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಒಂದು ಗುಂಪು ಮಠದ ಸಾಕಷ್ಟು ಆಸ್ತಿ ಅನ್ಯರ ಪಾಲಾಗಿದೆ, ತೋಟದಲ್ಲಿದ್ದ ಬಹುತೇಕ ಮರಗಳು ನೆಲಕಚ್ಚಿವೆ, ಇವೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿತು.
ಹಿಂದೆ 3500 ಎಕರೆ ಇದ್ದ ಪ್ರದೇಶ ಈಗ 550 ಎಕರೆಯಾಗಿದೆ. ಹಿಂದಿನಿಂದಲೂ ತನಿಖೆಯಾಗಲಿ, ಅತಿಕ್ರಮಣಕಾರರನ್ನು ಬಿಡಿಸಿ ಎಂದು ಮತ್ತೊಂದು ತಂಡ ವಾದ ಮಂಡಿಸಿತು.
ಬೇಳೂರು ಮಠದ ಆಸ್ತಪಾಸ್ತಿಗಳನ್ನು ಸಂರಕ್ಷಿಸಬೇಕು, ಮಠ ಅಭಿವೃದ್ಧಿ ಪಡಿಸಬೇಕು. ಆದ್ದರಿಂದ ಈ ಬಗ್ಗೆ ಸಾರ್ವನಿಕವಾಗಿ ಮಾಹಿತಿ ಸಂಗ್ರಹಿಸಬೇಕು. ಅದಕ್ಕಾಗಿ ಆಡಳಿತಾಧಿಕಾರಿಗಳೊಡನೆ ಚರ್ಚಿಸಿ ದಿನಾಂಕ ನಿಗಧಿಪಡಿಸಿ ಅದನ್ನು ಮಾಧ್ಯಮದ ಮೂಲಕ ತಿಳಿಸಿ. ಆಗ ಎಲ್ಲರೂ ದಾಖಲೆ ಸಹಿತ ಲಿಖಿತವಾಗಿ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ವೀರಶೈವ ಮುಖಂಡರು ತಿಳಿಸಿದರು.
ಇದಕ್ಕೆ ಒಪ್ಪಿದ ವಕೀಲ ವಿಶ್ವನಾಥ ಅವರು ಈ ಬಗ್ಗೆ ಆಡಳಿತಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಮೊಟಕುಗೊಳಿಸಿ ಚಿತ್ರದುರ್ಗಕ್ಕೆ ಮರಳಿದರು.
ಮಠದ ಮಾಜಿ ವ್ಯವಸ್ಥಾಪಕ ಶ್ರೀಕಂಠ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಮೋಕ್ಷಿತ, ತಾಲ್ಲೂಕು ಅಧ್ಯಕ್ಷ ಆದರ್ಶ, ವೀರಶೈವ ಮುಖಂಡರುಗಳಾದ ಡಿ.ಬಿ.ಧರ್ಮಪ್ಪ, ವಸಂತ್, ಶಿವಾನಂದ, ನಿತಿನ್, ಸೋಹನ್, ಚಂಗಡಹಳ್ಳಿಯ ಹಾಲಪ್ಪ, ರುದ್ರೇಶ್, ಬೇಳೂರು ಗ್ರಾಮದ ನವೀನ್, ಮಹೇಶ್, ದೇವೇಂದ್ರ ಮತ್ತಿತರರು ಹಾಜರಿದ್ದರು.











